ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

marraige
Published on

ಚೆನ್ನೈ: ಮದುವೆಯಂಥ ಸಂಭ್ರಮದ ಕ್ಷಣದಲ್ಲಿ ಅಪ್ಪ- ಅಮ್ಮನ ಪಾತ್ರ ಬಹುಮುಖ್ಯ. ಅದರಲ್ಲಿಯೂ ಮದುಮಗಳಿಗೆ ಈ ಸಂದರ್ಭದಲ್ಲಿ ಪಾಲಕರಿಗಿಂತ ಮಿಗಿಲಾದ ಗಿಫ್ಟ್​ ಬೇರೊಂದಿಲ್ಲ. ಆದರೆ ಅದೆಷ್ಟೋ ಮದುಮಕ್ಕಳಿಗೆ ಈ ಭಾಗ್ಯ ಸಿಗುವುದೇ ಇಲ್ಲ. ಅದಕ್ಕೆ ಕಾರಣ, ಮದುವೆಗೆ ಮುನ್ನವೇ ಅಪ್ಪನನ್ನೋ ಇಲ್ಲವೇ ಅಮ್ಮನನ್ನೋ ಕಳೆದುಕೊಂಡುಬಿಟ್ಟಿರುತ್ತಾರೆ. ಅಪ್ಪ-ಅಮ್ಮನ ಉಪಸ್ಥಿತಿಯಿಲ್ಲದ ಮದುವೆಯನ್ನು ಜೀರ್ಣಿಸಿಕೊಳ್ಳುವುದು ಹೆಣ್ಣುಮಕ್ಕಳಿಗಂತೂ ನುಂಗಲಾಗದ ತುತ್ತೇ.

ಆದರೆ ಇಲ್ಲೊಂದು ಅಪರೂಪದ ಮದುವೆ ನಡೆದಿದ್ದು, ಅದೀಗ ಭಾರಿ ಸುದ್ದಿ ಮಾಡಿದೆ. ಇದಕ್ಕೆ ಕಾರಣ, ತಂಗಿಯ ಮೇಲೆ ಅಕ್ಕನಿಗಿರುವ ಪ್ರೀತಿ. ಅದೇನೆಂದರೆ ಮೃತಪಟ್ಟ ತಂದೆಯನ್ನೇ ತಂಗಿಯ ಎದುರಿಗೆ ನಿಲ್ಲಿಸಿ ಮದುವೆಯನ್ನು ಮಾಡಿದ್ದಾರೆ ಈ ಅಕ್ಕ! ಅಕ್ಕನ ಈ ಪ್ರೀತಿಗೆ ಮದುಮಗಳಾಗಿರುವ ತಂಗಿ ಮಾತ್ರವಲ್ಲದೇ ಬಂದ ಜನರು ಆನಂದಬಾಷ್ಟ ಹರಿಸಿದ್ದಾರೆ.

ಇಂಥದ್ದೊಂದು ಅಪರೂಪದ ಘಟನೆ ನಡೆದಿರುವುದು ತಮಿಳುನಾಡಿನ ಪುದುಕೊಟ್ಟಾಯಿಯಲ್ಲಿ. ತಂದೆಯನ್ನು ಕಳೆದುಕೊಂಡಿರುವ ಭುವನೇಶ್ವರಿಯ ಮದುವೆ ನಡೆಯುತ್ತಿತ್ತು. ಅಪ್ಪನ ಅಗಲಿಕೆಯ ನೋವು ಆಕೆಯಲ್ಲಿ ತೀವ್ರವಾಗಿ ಕಾಡುತ್ತಿತ್ತು. ಇದನ್ನು ಅರಿತಿದ್ದ ಅಕ್ಕ ಲಕ್ಷ್ಮಿಪ್ರಭಾ ತಂದೆಯನ್ನು ತಂದು ತಂಗಿಯ ಎದುರಿಗೆ ನಿಲ್ಲಿಸಿದ್ದಾರೆ. ಅಷ್ಟಕ್ಕೂ ಲಕ್ಷ್ಮಿಪ್ರಭಾ ತಂದು ನಿಲ್ಲಿಸಿದ್ದು ಥೇಟ್​ ತಂದೆಯದ್ದೇ ಪ್ರತಿರೂಪದಂತಿರುವ ಮೂರ್ತಿಯನ್ನು.

ತಂಗಿಯೂ ಸೇರಿದಂತೆ ಮನೆಯಲ್ಲಿ ಯಾರಿಗೂ ತಿಳಿಸದೇ ತಂದೆಯ ಮೂರ್ತಿಯನ್ನು ಆರು ಲಕ್ಷ ರೂಪಾಯಿ ಖರ್ಚು ಮಾಡಿ ತಯಾರು ಮಾಡಿಸಿದ್ದ ಲಕ್ಷ್ಮಿಪ್ರಭಾ ಅವರು ತಂಗಿಯ ಮದುವೆಯ ಸಂದರ್ಭದಲ್ಲಿ ಮಂಟಪಕ್ಕೆ ತಂದು ನಿಲ್ಲಿಸಿದ್ದಾರೆ. ಅದನ್ನು ನೋಡಿದರೆ ಎಂಥವರೂ ಮೂರ್ತಿ ಎನ್ನಲಾರರು. ತಂದೆಯೇ ಬಂದು ನಿಂತತೆ ಭಾಸವಾಗುತ್ತಿತ್ತು.

ಇದನ್ನು ಕಂಡು ಎಲ್ಲರ ಕಣ್ಣಾಲಿಗಳು ತೇವಗೊಂಡವು. ಇನ್ನು ಮದುಮಗಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಈ ಅಕ್ಕ-ತಂಗಿಯ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 6 ಲಕ್ಷ ರೂಪಾಯಿ ನಮ್ಮಂಥವರಿಗೆ ಅತ್ಯಂತ ದುಬಾರಿಯೇ. ಆದರೆ ತಂಗಿಯ ಜೀವನದ ಅತ್ಯಂತ ಖುಷಿಯ ಕ್ಷಣದಲ್ಲಿ ತಂದೆಯ ಅನುಪಸ್ಥಿತಿ ಕಾಡಬಾರದು ಎನ್ನುವ ಕಾರಣಕ್ಕೆ ದುಬಾರಿಯಾದರೂ ಇದನ್ನು ಮಾಡಿಸಿದ್ದೇನೆ. ತಂಗಿಯ ಸಂತೋಷದ ಮುಂದೆ ಈ ಬೆಲೆ ಹೆಚ್ಚಲ್ಲ ಎಂದಿದ್ದಾರೆ ಲಕ್ಷ್ಮಿಪ್ರಭಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net