

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಂದು ಪತ್ರ ಬರೆದಿದ್ದು, ರೈತರ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಹೆಸರುಕಾಳಿಗೆ ರೂ.7,196 ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿಪಡಿಸಿರುವುದರಿಂದ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದೆ. ರಾಜ್ಯದ ಜನರು 25 ಜನ ಬಿ.ಜೆ.ಪಿ. ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಹೆಸರು ಕಾಳನ್ನು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಪತ್ರದಲ್ಲಿ ಇರುವುದಿಷ್ಟು...
ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ವಿವಿಧ ಎ.ಪಿ.ಎಂ.ಸಿ.ಗಳಲ್ಲಿ ಹೆಸರುಕಾಳು ಕ್ವಿಂಟಲ್‍ಗೆ 2,105 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ 5 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ.
ಹೆಸರನ್ನು ಕೊಯ್ಲು ಮಾಡಿ ಬಹಳ ದಿನಗಳ ಕಾಲ ರೈತರು ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿ ಕೊಳ್ಳುತ್ತಿದ್ದಾರೆ.
ಸರ್ಕಾರ ಇಲ್ಲಿಯವರೆಗೂ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಕಾಯ್ದೆಯನ್ನು ತಿದ್ದುಪಡಿ ಮಾಡಿ ಎ.ಪಿ.ಎಂ.ಸಿ.ಗಳನ್ನೇ ಬರ್ಖಾಸ್ತು ಮಾಡಲು ಹೊರಟಿದೆ. ಕಳೆದ ಬಾರಿ ಸಹ ತೊಗರಿ ಖರೀದಿಯಲ್ಲೂ ಸರ್ಕಾರ ರೈತರಿಗೆ ಮೋಸ ಮಾಡಿತು.
ರಾಜ್ಯದಲ್ಲಿ ಮುಂಗಾರಿನ ಮಳೆಗಳು ಚೆನ್ನಾಗಿದ್ದರಿಂದ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊಯ್ಲು ನಡೆಯುತ್ತಿದೆ. ರೈತರ ಶ್ರಮಕ್ಕೆ ಈ ಬೆಲೆ ಕಡಿಮೆಯೆ. ಆದರೆ ಅಷ್ಟಾದರೂ ಸಿಗಲಿ ಎಂದಿದ್ದಾರೆ.