VIDEO: ನರೇಂದ್ರ ಮೋದಿ ನೇತೃತ್ವದಲ್ಲಿ ನಡೀತಿದೆ ಕಾಂಗ್ರೆಸ್​ ಪಾದಯಾತ್ರೆ! ಮತ್ತೆ ಎಡವಿದ ಸಿದ್ದರಾಮಯ್ಯ

siddu
Published on

ಮೈಸೂರು: ಸಂಸದ ರಾಹುಲ್​ ಗಾಂಧಿಯ ಬಳಿಕ ಭಾಷಣ ಮಾಡುವಲ್ಲಿ ಹೆಚ್ಚಿನ ಟ್ರೋಲ್​ ಆಗುವವರು ಎಂದರೆ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರು ಭಾಷಣ ಮಾಡುತ್ತಿರುವುದನ್ನೇ ಕೇಳುತ್ತಿರುವ ಟ್ರೋಲಿಗರಿಗೆ ಸದಾ ಆಹಾರ ಒದಗಿಸುತ್ತಿದ್ದಾರೆ ಈ ಇಬ್ಬರು. ಅದೇ ರೀತಿ ಪುನಃ ಈಗ ಸಿದ್ದರಾಮಯ್ಯನವರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ‘ಭಾರತ್​ ಜೋಡೋ’ ಪೂರ್ವಭಾವಿ ಸಭೆ ಭಾಷಣ ವೇಳೆ ಸಿದ್ದರಾಮಯ್ಯ ಈ ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ನಾಯಕ ರಾಹುಲ್​ ಗಾಂಧಿಯವರ ಬದಲು ಪ್ರಧಾನಿ ಮೋದಿಯವರ ಜಪ ಮಾಡಿ, ಟ್ರೋಲಿಗೆ ಒಳಗಾಗಿದ್ದಾರೆ.

ತಮ್ಮದೇ ಧಾಟಿಯಲ್ಲಿ ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. 'ಬಿಜೆಪಿಯು ಪಿಎಸ್​ಐ ಹುದ್ದೆಗಳ ಪರೀಕ್ಷೆಯಲ್ಲಿ ಯುವಕರಿಂದ 300 ಕೋಟಿ ಹಣ ಲೂಟಿ ಮಾಡಿದೆ. ಬಿಜೆಪಿಯವರು ಲಜ್ಜೆಗೆಟ್ಟವರು. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್​ ಇದೆ' ಎಂದೆಲ್ಲಾ ಆಕ್ರೋಶ ಹೊರಹಾಕುತ್ತಿದ್ದರು. 'ಇಂಥ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಎಡಿಜಿಪಿ ಕಚೇರಿಯಲ್ಲಿ ಪಿಎಸ್‌ಐ ಪರೀಕ್ಷೆ ಉತ್ತರ ಬರೆಸಿದ್ದಾರೆ. ಖಾಲಿ ಪೇಪರ್ ಪಡೆದು ನಂತರ ಉತ್ತರವನ್ನ ಬರೆಯಲಾಗಿದೆ' ಎಂದರು.

ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಯ ವಿರುದ್ಧವೂ ಕಿಡಿ ಕಾರಿದ ಅವರು, 'ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ನಮಗೆಲ್ಲಾ‌ ನಮ್ಮ ಧರ್ಮ ಆಚರಿಸಲು ಅವಕಾಶ ಇದೆ. ಎಲ್ಲರನ್ನೂ ಮನುಷ್ಯರಾಗಿ ನೋಡಬೇಕು, ಈ ಕಾಯ್ದೆ ಸರಿಯಿಲ್ಲ. ಇವೆಲ್ಲವೂ ಬಿಜೆಪಿಯ ಕುತಂತ್ರ' ಎಂದು ಹೇಳಿದರು.

ಇಷ್ಟಾದ ಮೇಲೆ ಕಾಂಗ್ರೆಸ್​ ಸರ್ಕಾರವನ್ನು ಹೊಗಳಲು ತೊಡಗಿದರು. ಜನರು ಬಿಜೆಪಿಯ ವಿರುದ್ಧ ಹೋರಾಡಬೇಕಿದೆ. ಇದೇ ಕಾಂಗ್ರೆಸ್​ನ ಉದ್ದೇಶ ಕೂಡ ಎಂದ ಸಿದ್ದರಾಮಯ್ಯ, ಬಿಜೆಪಿಯನ್ನು ಹೋಗಲಾಡಿಸುವುದಕ್ಕಾಗಿಯೇ, ಜನರನ್ನು ಒಟ್ಟುಗೂಡಿಸಲು ನರೇಂದ್ರ ಮೋದಿಯವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದುಬಿಟ್ಟರು. ರಾಹುಲ್​ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎನ್ನುವ ಬದಲು, ಮೋದಿ ಹೆಸರನ್ನು ಹೇಳಿದರು.

ಕೂಡಲೇ ಪಕ್ಕದ್ದಲ್ಲಿ ಇದ್ದವರು ಅದನ್ನು ಸರಿಪಡಿಸಿದಾಗ, ಒಹ್​ ನಾನು ನರೇಂದ್ರ ಮೋದಿ ಅಂತಾ ಹೇಳಿದ್ನಾ ಎಂದು ಸಭೆಯಲ್ಲಿದ್ದವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವಿಡಿಯೋ ಸಕತ್​ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

ಮೋದಿಯವರು ಕಾಂಗ್ರೆಸ್​ ಸೇರಿಬಿಟ್ಟರಾ? ಕಾಂಗ್ರೆಸ್​ನ ಪಾದಯಾತ್ರೆಯನ್ನು ಮೋದಿ ನೇತೃತ್ವದಲ್ಲಿ ಮಾಡಲಾಗುತ್ತಿದೆಯೇ ಎಂದು ತಮಾಷೆ ಮಾಡುತ್ತಿದ್ದಾರೆ ಕಮೆಂಟಿಗರು. (ದಿಗ್ವಿಜಯ ನ್ಯೂಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net