ಶಾರದಾ ಚಿಟ್​ಫಂಡ್ ಗೋಲ್​ಮಾಲ್​: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್​?

sharadhachitfund
Published on

ಕೋಲ್ಕತ: ಪಶ್ಚಿಮ ಬಂಗಾಳದ ಬಹುಕೋಟಿ ಹಗರಣವಾಗಿರುವ ಶಾರದಾ ಚಿಟ್​ಫಂಡ್ ಪೋಂಜಿ ಸ್ಕ್ಯಾಮ್​ನ ಪ್ರಮುಖ ಆರೋಪಿ ಶಾರದಾ ಗ್ರೂಪ್​ನ ಮಾಲೀಕ ಮತ್ತು ನಿರ್ದೇಶಕನಾಗಿದ್ದ ಸುದೀಪ್ತಾ ಸೇನ್​ ಅವರಿಂದಾಗಿ ಈ ಹಗರಣ ಇದೀಗ ಬಹುತೇಕ ಎಲ್ಲಾ ಪಕ್ಷಗಳ ನಾಯಕರ ಬುಡಕ್ಕೆ ಬರುವ ಸಾಧ್ಯತೆ ಇದೆ.

ಇದಕ್ಕೆ ಕಾರಣ, ಸೇನ್​ ಅವರು ಈ ಹಗರಣಕ್ಕೆ ಕುರಿತಂತಎ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆದಿದ್ದು, ತಮ್ಮನ್ನಷ್ಟೇ ಬಂಧಿಸಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಈ ಹಗರಣದಲ್ಲಿ ಹಲವು ಪ್ರಮುಖ ವ್ಯಕ್ತಿಗಳು, ರಾಜಕೀಯ ಮುಖಂಡರೂ ಇದ್ದು, ಅವರ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿಲ್ಲ? ಈ ಹಗರಣದಲ್ಲಿ ಅವರೆಲ್ಲರೂ ಶಾಮೀಲಾಗಿದ್ದರೂ ನನ್ನ ವಿರುದ್ಧವಷ್ಟೇ ಕ್ರಮ ತೆಗೆದುಕೊಂಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ!

ಪ್ರೆಸಿಡೆನ್ಸಿ ಕರೆಕ್ಷನಲ್​ ಹೋಂ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸೇನ್​, ಇದಾಗಲೇ ತಾವು ಎಲ್ಲಾ ಮುಖಂಡರ ಹೆಸರುಗಳನ್ನು ಸಿಬಿಐಗೆ ಹೇಳಿರುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ತಾವು ಶಾರದಾ ಗ್ರೂಪ್​ನ ನಿರ್ದೇಶಕನಾಗಿದ್ದ ವೇಳೆ ಬಿಜೆಪಿ, ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಪ್ರಮುಖ ನಾಯಕರು ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ನೈತಿಕತೆ ಬಗ್ಗೆ ದೊಡ್ಡದೊಡ್ಡ ಭಾಷಣ ಮಾಡುತ್ತಿರುವವರು ನಿಜಕ್ಕೂ ಬಡಜನರಿಗೆ ಮೋಸ ಮಾಡಿದ್ದಾರೆ. ಅವರ ಬಗ್ಗೆ ಸಿಬಿಐ, ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಅವರು ಮೌನವಾಗಿದ್ದಾರೆ ಎಂದು ಆರೋಪಿಸಿರುವ ಸೇನ್​, ಸಿಬಿಐ ಮತ್ತು ರಾಜ್ಯ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.

ಸುದಿಪ್ತಾ ಸೇನ್​ ಡಿಸೆಂಬರ್​ 1ರಂದು ಬರೆದಿರುವ ಈ ಪತ್ರದಲ್ಲಿರುವ ಆರೋಪವನ್ನು ಕಾಂಗ್ರೆಸ್​, ಬಿಜೆಪಿ, ಸಿಪಿಎಂ, ಅಲ್ಲಗಳೆದಿವೆ. ಇದು ಹಾಸ್ಯಾಸ್ಪದ ಎಂದು ಹೇಳಿವೆ. ಆದರೆ ಟಿಎಂಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಏನಿದು ಕೇಸ್​?

ಪಶ್ಚಿಮ ಬಂಗಾಳದಲ್ಲಿ ಸಕ್ರಿಯವಾಗಿದ್ದ ಶಾರದಾ ಸಮೂಹದ ಹಣಕಾಸು ಹಗರಣವಿದು. ಶಾರದಾ ಗ್ರೂಪ್‌ ಪೋಂಜಿ ಸ್ಕೀಮ್‌(ಅತಿ ಹೆಚ್ಚಿನ ಬಡ್ಡಿ ಆಮಿಷ) ನಡೆಸುತ್ತಿತ್ತು. ಇದರಲ್ಲಿ 200ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಭಾಗಿಯಾಗಿದ್ದವು. ಹಣದುಪ್ಪಟ್ಟು ಮಾಡಿಕೊಡುವ ಆಮಿಷ ಒಡ್ಡಿರುವ ಆರೋಪ ಇದರ ಮೇಲಿದೆ.

ಹಗರಣ ಬಯಲಾಗುವ ಮುಂಚೆ ಅಂದರೆ, 2013ರ ವೇಳೆಗೆ, 17 ಲಕ್ಷ ಠೇವಣಿದಾರರಿಂದ ಸಂಸ್ಥೆಯು 200ರಿಂದ 300 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು. 200ರಿಂದ 300 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು. ಆದರೆ ನಂತರ ಅಕ್ರಮ ಕಂಡುಬಂದಿದ್ದರಿಂದ ಸುಪ್ರೀಂಕೋರ್ಟ್ ಇದರ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ, ರಾಜಕಾರಣಿಗಳ ನಂಟು, ನಿಯಂತ್ರಣಾ ಪ್ರಾಧಿಕಾರಗಳ ವೈಫಲ್ಯ ಕಂಡು ಬಂದಿದ್ದರಿಂದ ಸುಪ್ರೀಂ ಕೋರ್ಟ್‌ 2014ರಲ್ಲಿ ಎಲ್ಲ ತನಿಖೆಯನ್ನು ಸಿಬಿಐಗೆ ವಹಿಸಿತು. ತನಿಖೆ ಚುರುಕಾಗುತ್ತಿದ್ದಂತೆ ಅನೇಕ ಪ್ರಭಾವಿ ರಾಜಕಾರಣಿಗಳು ಬಂಧನಕ್ಕೊಳಗಾದರು. ಈಗಾಗಲೇ ಈ ಹಗರಣದಲ್ಲಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಸೇರಿ ಕೆಲವು ಗಣ್ಯರ ಹೆಸರು ಕೇಳಿಬಂದಿದ್ದು ಸೇನ್​ ಮತ್ತಿಷ್ಟು ಮಂದಿ ಇರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net