ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

tirumala
Published on

ತಿರುಪತಿ (ಆಂಧ್ರ ಪ್ರದೇಶ): ಜಗತ್ತಿನ ಸಿರಿವಂತ ದೇವಾಲಯ ಎನಿಸಿಕೊಂಡಿರುವ ತಿರುಮಲ ದೇಗುಲಕ್ಕೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ, ವಜ್ರಾಭರಣಗಳನ್ನು ಭಕ್ತಾದಿಗಳು ಕೊಡುವುದು ಹೊಸ ವಿಷಯವೇನಲ್ಲ. ಇದೀಗ ಅಂಥದ್ದೇ ಒಂದು ಅಪೂರ್ವ ಕಾಣಿಕೆ ನೀಡಿದ್ದಾರೆ ತಮಿಳುನಾಡಿನ ಭಕ್ತ.

ತಿರುಮಲನಿಗಾಗಿ ಚಿನ್ನದ ಶಂಖ- ಚಕ್ರವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಈ ಭಕ್ತ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಇಂಥದ್ದೊಂದು ಬಹು ಬೆಲೆ ಬಾಳುವ ಕಾಣಿಕೆ ನೀಡಿರುವವರು ತಂಗದೊರೈ. ಇವರು ತಮಿಳುನಾಡಿನ ಥೇನಿಯನವರು. ತಿರುಪತಿಯಲ್ಲಿ ನಡೆದ ಮಹಾ ಪೂಜೆಯ ಬಳಿಕ ಚಿನ್ನದ ಶಂಕು ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ಇವರು ನೀಡಿದ್ದಾರೆ.

ಇದರ ಬೆಲೆ ಎಷ್ಟು ಗೊತ್ತಾ? ಎರಡು ಕೋಟಿ ರೂಪಾಯಿ! ಈ ಬಗ್ಗೆ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟಕ್ಕೂ ಇಂಥದ್ದೊಂದು ಬಹುಬೆಲೆಬಾಳುವ ಕಾಣಿಕೆ ನೀಡಲು ಕಾರಣ ಕೋವಿಡ್‌. ಹೌದು. ಬಿಜಿನೆಸ್‌ಮನ್‌ ಆಗಿರುವ ತಂಗದೊರೈ, ಲಾಕ್‌ಡೌನ್‌ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೋಂಕಿನಿಂದ ಬಳಲುತ್ತಿದ್ದರು. ಮಾತ್ರವಲ್ಲದೇ ನಷ್ಟವನ್ನೂ ಅನುಭವಿಸಿದ್ದರು. ತಾವು ಬೇಗ ಗುಣಮುಖರಾಗಿ ಸಂಕಷ್ಟದಿಂದ ಪಾರಾಗಲು ತಿರುಮಲನಿಗೆ ಇವರು ಪ್ರಾರ್ಥನೆ ಸಲ್ಲಿಸಿದ್ದರು. ಹೀಗಾದರೆ ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಚಿನ್ನದ ಆಭರಣ ಅರ್ಪಿಸಿರುವುದಾಗಿ ತಂಗದೊರೈ ತಿಳಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net