VIDEO: ಭೀಮಾ ತಟದಲ್ಲಿ ಪ್ರವಾಹ: ಏಳು ಸೇತುವೆ ಮುಳುಗಡೆ; ಮಹಾರಾಷ್ಟ್ರಕ್ಕೆ ಸಂಪರ್ಕ ಕಟ್​

1351718
Published on

ವಿಜಯಪುರ: ನೆರೆಯ ಮಹಾರಾಷ್ಟ್ರದ ಉಜನಿ‌ ಹಾಗೂ ವೀರ್ ಜಲಾಶಯಗಳಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿ ಭಾಗ ವಿಜಯಪುರ ಜಿಲ್ಲೆಯ ಭೀಮಾನದಿ ತಟದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಚಡಚಣ ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಿಸುವಂತಾಗಿದೆ.

ಭೀಮಾನದಿಗೆ 1,16,000 ಕ್ಯೂಸೆಕ್ ನೀರು‌ ಬಿಡುಗಡೆಯಾಗಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ ಏಳು ಬ್ಯಾರೇಜ್ ಕಂ ಬ್ರಿಡ್ಜ್ ಗಳು ಮುಳುಗಡೆ‌ಯಾಗಿವೆ.

ಗೋವಿಂದಪುರ - ಬಂಡಾರಕವಟೆ, ಉಮರಾಣಿ - ಲವಂಗಿ, ಔಜ್‌‌ - ಶಿರನಾಳ, ಹಿಂಗಣಿ - ಆಳಗಿ, ಖಾನಾಪೂರ - ಪಡನೂರ, ಹಿಳ್ಳಿ - ಗುಬ್ಬೇವಾಡ, ಚಣೇಗಾಂವ - ಬರೂರು ಬಾಂದಾರ್​ಗಳು ಮುಳುಗಡೆಯಾಗಿವೆ. ಇವೆಲ್ಲಾ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಂಪರ್ಕಕೊಂಡಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಬಾಂದಾರ್​ಗಳ ಮೇಲಿನ ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂಪರ್ಕ ಬಂದ್ ಮಾಡಲಾಗಿದೆ. ನದಿ ತೀರದ ಗ್ರಾಮಗಳ ಜನರು ಸುರಕ್ಷತಾ ಕ್ರಮ ತೆಗದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನದಿಪಾತ್ರದಲ್ಲಿ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ.

ಬಾಂದಾರ್ ಮುಳುಗಡೆ ಸ್ಥಳಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. ಉಮರಾಣಿ, ಉಮರಜ, ಹಿಂಗಣಿ, ಚಣೆಗಾಂವ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿರುವ ಅವರು, ನದಿ ತೀರಕ್ಕೆ ಯಾರೂ ಹೋಗದಂತೆ ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net