ಪಾರ್ಟಿ ಕೊಡಿಸುವ ದಿನಗಳು ಮುಗಿದಿವೆ... ತನ್ನ ನಿಧನದ ಸುದ್ದಿ ತಾನೇ ಬರೆದು ಮೃತಪಟ್ಟ!

obituary
Published on

ಚೆನ್ನೈ: ಇದೊಂದು ವಿಚಿತ್ರ ಘಟನೆ. ವ್ಯಕ್ತಿ ಮೃತಪಟ್ಟ ಮೇಲೆ ಅವರ ನಿಧನದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ನಿಧನದ ಸುದ್ದಿಯನ್ನು ತಾವೇ ಬರೆದಿದ್ದಾರೆ. ಅವರು ಮೃತಪಟ್ಟ ಮೇಲೆ ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇಂಥದ್ದೊಂದು ಅಪರೂಪದ ರೀತಿಯಲ್ಲಿ ನಿಧನದ ಸುದ್ದಿ ಮಾಡಿದವರು ಚೆನ್ನೈನ ಎಜ್ಜಿ ಕೆ. ಉಮಾಮಹೇಶ್​ ಎನ್ನುವವರು. ತಮ್ಮ ನಿಧನ ವಾರ್ತೆಯನ್ನು ತಾವೇ ಬರೆದಿಟ್ಟಿರುವ ಈ 72 ವರ್ಷದ ವ್ಯಕ್ತಿ ಇದೀಗ ಮೃತಪಟ್ಟಿದ್ದಾರೆ. ಅವರೇ ಬರೆದಿರುವ ನಿಧನದ ಸುದ್ದಿ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ತಮ್ಮ ನಿಧನದ ಸುದ್ದಿಯನ್ನು ಬರೆದು ಅದನ್ನು ತಮ್ಮ ಕುಟುಂಬದವರಿಗೆ ನೀಡಿದ್ದ ಎಜ್ಜಿ, ತಾವು ಮೃತಪಟ್ಟ ಮೇಲೆ ಅದನ್ನು ಫೇಸ್​ಬುಕ್​, ಟ್ವಿಟರ್​ನಲ್ಲಿ ಪ್ರಕಟಿಸುವಂತೆ ಹೇಳಿದ್ದರು. ಅದೇ ರೀತಿ ಅವರು ಕುಟುಂಬಸ್ಥರು ಅದನ್ನು ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಅವರು ಬರೆದಿರುವುದು ಇಷ್ಟು...

ಇದು ಎಜ್ಜಿ ಕೆ. ಉಮಾಮಹೇಶ್ ಅವರಿಂದ ಸ್ವಯಂ-ಲಿಖಿತ ನಿಧನವಾರ್ತೆ. ಜನ್ಮಜಾತ ವಿಲಾಸಿಯಾಗಿರುವ, ಸದಾ ಒಂದಿಲ್ಲೊಂದು ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ, ಜೀವಿತಾವಧಿ ಪೂರ್ತಿಯಾಗಿ ಹೌಸ್​ಹಸ್​ಬಂಡ್​ ಹಾಗೂ ಹೋಮ್​ ಮೇಕರ್​ ಆಗಿ ಕೆಲಸ ಮಾಡಿರುವ, ರಂಗಭೂಮಿ ಮತ್ತು ಚಿತ್ರದ ನಟನಾಗಿರುವ, ಅಂತಾರಾಷ್ಟ್ರೀಯ ಕಾರು ರ್ಯಾಲಿ ಚಾಲಕ ಆಗಿರುವ, ಸಂಘಟಕ, ವಿಚಾರವಾದಿ, ಮಾನವತಾವಾದಿ, ನಾಸ್ತಿಕ, ಮುಕ್ತ ಚಿಂತಕ.. ಹೀಗೆ . ಇನ್ನೂ ಏನೇನೋ... ಆಗಿರುವ ಇವರು ನಿಧನರಾಗಿದ್ದಾರೆ.

ಈಗ ಮುಂದೆ ಹೇಳುತ್ತಿರುವ ವಿಷಯ ನನ್ನ ಶತ್ರುಗಳಿಗೆ, ನನ್ನ ಮಿತ್ರರಿಗೆ ಹಾಗೂ ಶತ್ರು-ಮಿತ್ರದ ನಡುಭಾಗದಲ್ಲಿ ಇರುವವರಿಗೆ. ಅದೇನೆಂದರೆ, ನನ್ನ ರೋಚಕ ಜೀವನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಾನು ಕೊಡಿಸುವ ಪಾರ್ಟಿ ಇಂದಿಗೆ ಮುಗಿದಿದೆ. ನನ್ನಂದಿ ಇದುವರೆಗೆ ಪಾರ್ಟಿ ಪಡೆದುಕೊಂಡಿರುವವರು ಎಲ್ಲರೂ ಹ್ಯಾಂಗ್​ಓವರ್​ನಿಂದ ಹೊರಕ್ಕೆ ಬಂದಿರುವುದಾಗಿ ನಾನು ಭಾವಿಸುತ್ತೇನೆ. ಇನ್ನು ಮುಂದೆ ಆ ಸಮಯ ಬರುವುದಿಲ್ಲ. ಚೆನ್ನಾಗಿ ಬದುಕು, ನಿಮ್ಮ ಜೀವನವನ್ನು ಆನಂದಿಸಿ ಮತ್ತು ಪಾರ್ಟಿಯನ್ನು ಮುಂದುವರಿಸಿ. ಚಿಯರ್ಸ್​ ಮತ್ತು ಬೈ ಬೈ... ಇತಿ ನಿಮ್ಮ ಇಜ್ಜಿ...

ಈ ಪೋಸ್ಟ್​ ನೋಡಿ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ. ಇಜ್ಜಿಯವರ ಹೃದಯವೈಶಾಲ್ಯತೆಯ ಹಲವಾರು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಈಗ ಈ ನಿಧನವಾರ್ತೆ ಭಾರಿ ವೈರಲ್​ ಆಗಿದೆ.

ಈ ಹಿಂದೆ ತಮ್ಮ ವಿಂಟೇಜ್​ ಕಾರು ಹಾನಿಗಳಗಾದ ಸಂದರ್ಭದಲ್ಲಿಯೂ ಅದರ ನಿಧನವಾರ್ತೆಯನ್ನು ಅತ್ಯಂತ ನೋವಿನಿಂದ ಬರೆದು ಶೇರ್​ ಮಾಡಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net