

ಪಟ್ನಾ: ಮದುವೆಯಾಗಿ ಒಂದು ಮಗುವಿದ್ದರೂ ಆಕೆಗೂ ತಿಳಿಯದಂತೆ, ಇನ್ನೊಬ್ಬಳಿಗೂ ಹೇಳದೇ ಮತ್ತೊಂದು ಮದುವೆಯಾದ ಭೂಪನೊಬ್ಬ ಇಬ್ಬರೂ ಪತ್ನಿಯರಿಂದ ಧರ್ಮದೇಟು ತಿಂದ ಘಟನೆ ಬಿಹಾರದ ಅಮರಪುರ ಗ್ರಾಮದಲ್ಲಿ ನಡೆದಿದೆ.
ಈ ಒಂದು ಸಾಹಸಕ್ಕೆ ಕೈಹಾಕಿ ಚಪ್ಪಲಿ ಏಟು ತಿಂದಿರುವವನ ಹೆಸರು ರೂಪೇಶ್ ಕುಮಾರ್. ಈತ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದು ಹೆಣ್ಣುಮಗುವಿದೆ. ಆದರೆ ಯಾರ ಅರಿವಿಗೂ ಬಾರದಂತೆ ಮತ್ತೊಂದು ಮದುವೆಯಾಗಿದ್ದಾನೆ.
ಮದುವೆಯಾಗಿ ಹೊಸ ಹೆಂಡತಿ ಜತೆಗೆ ಮನೆಗೆ ಬಂದಿರುವ ರೂಪೇಶ್‌ನನ್ನು ಕಂಡು ಮೊದಲ ಪತ್ನಿ ಹೌಹಾರಿ ಹೋಗಿದ್ದಾಳೆ. ಮೊದಲೇ ಆ ಮನೆಯಲ್ಲಿ ಹೆಣ್ಣು ಇರುವುದನ್ನು ಕಂಡು ಎರಡನೆಯ ಪತ್ನಿಯೂ ಸುಸ್ತಾಗಿದ್ದಾಳೆ. ಇದರ ನಡುವೆಯೇ ಎರಡನೆಯ ಪತ್ನಿಯನ್ನು ಸ್ವಾಗತಿಸುವಂತೆ ಮೊದಲ ಪತ್ನಿಗೆ ರೂಪೇಶ್ ಆವಾಜ್ ಹಾಕಿದ್ದಾನೆ.
ಕೂಡಲೇ ಆಕೆ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಾಳೆ. ಅಣ್ಣ ಬರುವ ಮುನ್ನವೇ ಅಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಗಂಡನಿಗೆ ಚೆನ್ನಾಗಿ ಬಾರಿಸಿದ್ದಾಳೆ.
ಇತ್ತ ಎರಡನೆಯ ಪತ್ನಿ ರೋಸಿಹೋಗಿದ್ದು, ಅಲ್ಲಿಯೇ ಸಿಕ್ಕ ಪೊರಕೆಯಿಂದಲೇ ಗಂಡನಿಗೆ ಚೆನ್ನಾಗಿ ಹೊಡೆದಿದ್ದಾಳೆ. ಇಬ್ಬರೂ ಪತ್ನಿಯರು ಥಳಿಸಿರುವುದಾಗಿ ರೂಪೇಶ್ ಬೊಬ್ಬೆ ಹಾಕಿದ್ದು, ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೊನೆಯ ಮೊದಲ ಪತ್ನಿ ಇರುವುದನ್ನು ತಿಳಿದ ಎರಡನೆಯವಳು ರೂಪೇಶ್ ಕಟ್ಟಿದ್ದ ಮಾಂಗಲ್ಯ ಕಿತ್ತು, ಸಿಂಧೂರ ಅಳಸಿ ಊರಿಗೆ ಮರಳಿದಳು. ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆಯಿತು. ಸದ್ಯ ರೂಪೇಶ್ ಮೊದಲ ಪತ್ನಿಯ ಜತೆ ಇದ್ದಾನೆ.