

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಮ್ಮನ್ನು ಅಗಲಿ ಒಂದು ತಿಂಗಳಾಗಿದೆ. ಹಲವಾರು ಚಿತ್ರಗಳಲ್ಲಿ ಹೀರೋ ಪಾತ್ರಧಾರಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ವಿಜಯ್ ಅವರು ಇದೀಗ ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದಿದ್ದಾರೆ.
ಇದಕ್ಕೆ ಕಾರಣ ಅವರು ಮಾಡಿರುವ ಅಂಗಾಂಗ ದಾನ. ಬೈಕ್ ಅಪಘಾತದಲ್ಲಿ ಬ್ರೇನ್ ಡೆಡ್ ಆಗಿದ್ದ ವಿಜಯ್ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬಸ್ಥರ ನಿರ್ಧಾರದಿಂದಾಗಿ ಇಬ್ಬರು ದೃಷ್ಟಿ ಪಡೆದಿದ್ದಾರೆ. ಜೂನ್ 15ರಂದು ಸಂಚಾರಿ ವಿಜಯ್ ಮೃತಪಟ್ಟರು. ಅಂದು ಅವರ ಯಕೃತ್ತು (ಲಿವರ್), 2 ಮೂತ್ರಪಿಂಡಗಳು, ಹೃದಯದ ಕವಾಟ (ಹಾರ್ಟ್ ವಾಲ್ವ್) ಮತ್ತು ಕಾರ್ನಿಯಾಗಳನ್ನು ಪಡೆದು ಅವಶ್ಯವಿರುವ ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಕುಟುಂಬದ ಈ ನಿರ್ಧಾರದಿಂದಾಗಿ ಅಚ್ಚರಿ ಎನ್ನುವಂತೆ ದಾಖಲೆಯ ಪ್ರಮಾಣದಲ್ಲಿ ಜನರು ಅಂಗಾಂಗದಾನಕ್ಕೆ ಮುಂದಾಗಿದ್ದಾರೆ. ಸಂಚಾರಿ ವಿಜಯ್ ಅವರಂತೆಯೇ ತಾವೂ ಅಂಗಾಂಗ ದಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಅಂಗಾಂಗ ದಾನದ ಪ್ರಕ್ರಿಯೆ ಕೋವಿಡ್ ಕಾರಣಗಳಿಂದ ನಿಂತೇ ಹೋಗಿತ್ತು. ಹೆಚ್ಚಿನ ಮಂದಿ ಇದಕ್ಕೆ ಮುಂದೆ ಬರುತ್ತಿರಲಿಲ್ಲ. ಆದರೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ನಂತರ ಕೇವಲ 20 ದಿನಗಳಲ್ಲಿ 230 ಜನ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯದಲ್ಲಿ ಅಂಗಾಂಗ ದಾನದ ನಿರ್ವಹಣೆ ಮಾಡುವ ಸ್ಟೇಟ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಮತ್ತು ಟಿಶ್ಶೂ ಆರ್ಗನೈಜೇಶನ್ ಸಿಬ್ಬಂದಿ.
ಸಂಚಾರಿ ವಿಜಯ್ ಅವರ ಬ್ರೇನ್‌ಡೆಡ್ ಆಗಿದ್ದ ಸಂದರ್ಭದಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಲ್ಲ ಎಂದಾಗ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾದರು. ಇದರಿಂದ ಕೆಲವರು ಮರುಜನ್ಮ ಪಡೆದುಕೊಂಡಿದ್ದಾರೆ. ತಮ್ಮ ಕುಟುಂಬದವರು ಮೃತಪಡುತ್ತಿರುವುದು ಗೊತ್ತಾದಾಗ ಆ ಪರಿಸ್ಥಿತಿಯಲ್ಲಿ ಕುಟುಂಬದವರು ವಿಚಲಿತರಾಗುವುದು ಸಹಜ. ಆದರೆ ಅದೇ ವೇಳೆ ಅಂಗಾಂಗದಾನಕ್ಕೆ ಅವರು ಮುಂದಾದರೆ ಎಷ್ಟೋ ಮಂದಿಯ ಪ್ರಾಣ ಕಾಪಾಡಬಹುದು ಎನ್ನುತ್ತಾರೆ ವೈದ್ಯರು. ಸಂಚಾರಿ ವಿಜಯ್ ಬದುಕಿದ್ದಾಗ ಜನರ ಸೇವೆಗೆ, ಸಹಾಯಕ್ಕೆ ನಿಂತಿದ್ದವರು. ಹಾಗಾಗಿ ಕುಟುಂಬಸ್ಥರು ಈ ನಿರ್ಧಾರ ತೆಗೆದುಕೊಂಡರು. ಆದರೆ ಅಚ್ಚರಿಯ ರೀತಿಯಲ್ಲಿ ಇದು ಹಲವರಿಗೆ ಪ್ರೇರಣೆಯಾಗಿದೆ ಎನ್ನುವುದು ಅವರ ಅಭಿಮತ.
2020ರಲ್ಲಿ ಕರ್ನಾಟಕದಲ್ಲಿ ಕೇವಲ 35 ಅಂಗಾಂಗ ದಾನಗಳು ಮಾತ್ರವೇ ನಡೆದಿದೆ. ಸದ್ಯದ ಪರಿಸ್ಥಿತಿ ಗಮನಿಸುವುದಾದರೆ 3720 ಜನ ಮೂತ್ರಪಿಂಡಕ್ಕಾಗಿ, 113 ಜನ ಹೃದಯಕ್ಕಾಗಿ, 50 ಜನ ಶ್ವಾಸಕೋಶಕ್ಕೆ ಮತ್ತು 50 ಜನ ಲಿವರ್ಗಾಗಿ ಕಾಯುತ್ತಿದ್ದಾರೆ. 30 ಜನರಿಗೆ ಲಿವರ್ ಮತ್ತು ಮೂತ್ರಪಿಂಡ ಎರಡೂ ಬೇಕಾಗಿದೆ. 22 ಜನರಿಗೆ ಹೃದಯ ಮತ್ತು ಶ್ವಾಸಕೋಶ ಎರಡೂ ಬೇಕಾಗಿದ್ದು 19 ಜನರಿಗೆ ಕಿಡ್ನಿ ಮತ್ತು ಪ್ಯಾಂಕ್ರಿಯಾಸ್ ಎರಡೂ ಅಂಗಗಳ ಅವಶ್ಯಕತೆ ಇದೆ. ಇವರೆಲ್ಲಾ ದಾನಿಗಳಿಗಾಗಿ ಕಾಯುತ್ತಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಸಂಚಾರಿ ವಿಜಯ್ ಅವರಿಂದ ಇನ್ನಷ್ಟು ಮಂದಿ ಪ್ರೇರೇಪಿತರಾದರೆ ಸಹಸ್ರಾರು ರೋಗಿಗಳ ಜೀವ ಉಳಿಸಬಹುದಾಗಿದೆ.