

ಲಾಸ್ ಏಂಜಲಿಸ್: ಸಿನಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎಂದರೆ ಆಸ್ಕರ್. ಈ ಪ್ರಶಸ್ತಿಯನ್ನು ಗಳಿಸುವುದು ಸಿನಿಮಾ ಜಗತ್ತಿನ ಬಹುತೇಕ ಮಂದಿಯ ಗುರಿಯಾದರೆ, ಈ ಪ್ರಶಸ್ತಿಗೆ ನಾಮನಿರ್ದೇಶನ ಆಗುವುದು ಕೂಡ ದೊಡ್ಡ ಮಾತೇ. ಅಂಥದ್ದೊಂದು ವಿಶೇಷ ಅವಕಾಶ ಸಿಕ್ಕಿದೆ ಭಾರತೀಯ ಸಾಕ್ಷ್ಯಚಿತ್ರ ರೈಟಿಂಗ್ ವಿಥ್ ಫೈಯರ್.
ಬಹು ನಿರೀಕ್ಷೆ ಹುಟ್ಟಿಸಿದ್ದ ನಟ ಸೂರ್ಯ ನಟನೆಯ ತಮಿಲು ಚಿತ್ರ ಜೈ ಭೀಮ್ ಅಂತಿಮ ಪಟ್ಟಿಯಿಂದ ಹೊರಕ್ಕೆ ಉಳಿದಿದ್ದು, ರೈಟಿಂಗ್ ವಿಥ್ ಫೈಯರ್ ಮೇಲೆ ಈಗ ನಿರೀಕ್ಷೆ ಹೆಚ್ಚಾಗಿದೆ.
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 94ನೇ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಈ ಪ್ರಶಸ್ತಿಗಳ ನಾಮನಿರ್ದೇಶಿತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ರೈಟಿಂಗ್ ವಿಥ್ ಫೈಯರ್ ಸಾಕ್ಷ್ಯಚಿತ್ರದ ಹೆಸರು ಇದೆ. ದಲಿತ ಮಹಿಳೆಯರು ನಡೆಸುವ ಪತ್ರಿಕೋದ್ಯಮದ ಕುರಿತು ಮಾಹಿತಿ ಒಳಗೊಂಡಿದೆ ಈ ಸಾಕ್ಷ್ಯಚಿತ್ರ.
ಉತ್ತರಪ್ರದೇಶದ ಪತ್ರಿಕಾರಂಗದಲ್ಲಿ ಹೇಗೆ ಏಳು ಜನ ದಲಿತ ಹೆಣ್ಣು ಮಕ್ಕಳು 2002ರಲ್ಲಿ ಖಬರ್ ಲಹರಿಯಾ ಎಂಬ ಪತ್ರಿಕೆಯ ಆರಂಭಮಾಡಿ ಯಶಸ್ಸು ಕಂಡರು. ಚಿತ್ರಕೂಟ ಜಿಲ್ಲೆಯ ಕರ್ವಿ ಹಳ್ಳಿಯಲ್ಲಿ ಆರಂಭವಾಗಿರುವ ಈ ಪತ್ರಿಕೆ ಯಶಸ್ಸು ಪಡೆಯಲು ಅವರು ಏನೇನೋ ಸವಾಲುಗಳನ್ನು ಎದುರಿಸಬೇಕಾಯಿತು ಎಂಬ ಬಗ್ಗೆ ಇದರಲ್ಲಿ ತಿಳಿಸಲಾಗಿದೆ. ಈ ಪತ್ರಿಕೆಯು ಲಿಂಗ ಸಮಾನತೆ ಪರವಾಗಿ ಹಾಗೂ ಜಾತಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾರಂಭದಿಂದಲೂ ಮಾಡಿಕೊಂಡು ಬಂದಿದೆ.
ಬದಲಾವಣೆಗೆ ಕಾರಣವಾಗುವ ಕಥೆಯೆಂದರೆ ನಮಗೆ ಮೊದಲಿನಿಂದಲೂ ಆಸಕ್ತಿ. ಈಗ ಭಾರತದ ಸಾಕ್ಷ್ಯಚಿತ್ರವೊಂದು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿದ್ದು ನೋಡಿ ಸಂತಸವಾಗಿದೆ ಎಂದು ಸಹ ನಿರ್ದೇಶಕರಾದ ಸುಷ್ಮಿತಾ ಘೋಷ್ ಹೇಳಿದ್ದಾರೆ.
ಸುಡಾನ್ ಫಿಲಂ ಫೆಸ್ಟಿವಲ್, ಬ್ಲ್ಯಾಕ್ ಸ್ಟಾರ್ ಫಿಲಂ ಫೆಸ್ಟಿವಲ್, ಸ್ಯಾನ್‌ಫ್ರಾನ್ಸಿಸ್ಕೊ ಫಿಲಂ ಫೆಸ್ಟಿವಲ್, ಸಿಯಾಟಲ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್, ವಾಷಿಂಗ್ಟನ್ ಡಿಸಿ ಫಿಲಂ ಫೆಸ್ಟಿವಲ್, ಪೋಲೆಂಡ್ ಫಿಲಂ ಫೆಸ್ಟಿವಲ್, ಅಲ್ ಜಜೀರ ಡಾಕ್ಯುಮೆಂಟರಿ ಫೆಸ್ಟ್, ಅಂತಾರಾಷ್ಟ್ರೀಯ ಹೂಮನ್ ರೈಟ್ಸ್ ಫಿಲಂ ಫೆಸ್ಟಿವಲ್ ಇನ್ನೂ ಹಲವಾರು ವೇದಿಕೆಗಳಲ್ಲಿ 'ರೈಟಿಂಗ್ ವಿಥ್ ಫೈಯರ್' ಸಾಕ್ಷ್ಯಚಿತ್ರ ಪ್ರಶಸ್ತಿ ಗಳಿಸಿದೆ.
ಇಲ್ಲಿದೆ ನೋಡಿ ಸಾಕ್ಷ್ಯಚಿತ್ರದ ಟ್ರೇಲರ್: