VIDEO: ಮದುವೆ ದಿನ ಡಿಫರೆಂಟ್‌ ಆಗಿ ಕಾಣಿಸಿಕೊಳ್ಳೋ ಭರದಲ್ಲಿ ತಲೆಕೆಳಗಾಗಿ ಬಿದ್ದ ಜೋಡಿ! ವಿಡಿಯೋ ವೈರಲ್‌

1202970
Published on

ರಾಯ್​​ಪುರ್​​(ಛತ್ತೀಸ್​​ಗಢ): ಮದುವೆಯ ದಿನ ಏನಾದರೂ ಡಿಫರೆಂಟ್‌ ಆಗಿ ಕಾಣಿಸಬೇಕು, ವಿಭಿನ್ನ ರೀತಿಯಲ್ಲಿ ಮದುವೆ ಆಚರಿಸಿಕೊಳ್ಳಬೇಕು, ಯಾರೂ ಮಾಡದಂಥ ಹೊಸತನವೊಂದು ಮದುವೆಯ ಸಂದರ್ಭದಲ್ಲಿ ಮಾಡಬೇಕು... ಇತ್ಯಾದಿಯಾಗಿ ಆಸೆ ಇಟ್ಟುಕೊಳ್ಳುವವರು ಕೆಲವರು. ಅದಕ್ಕಾಗಿಯೇ ಹೊಸಹೊಸ ಸಾಹಸಗಳಿಗೂ ಕೈಹಾಕುತ್ತಾರೆ.

ಇಂಥದ್ದೇ ಒಂದು ಹೊಸ ಸಾಹಕ್ಕೆ ಕೈಹಾಕಲು ಹೋಗಿ ಭಾರಿ ಅವಘಡ ಸಂಭವಿಸಿರುವ ಘಟನೆ ಛತ್ತೀಸಗಢದ ರಾಯ್​ಪುರ್​​ದಲ್ಲಿ ನಡೆದಿದೆ. ವಿವಾಹ ಸಮಾರಂಭವನ್ನು ಸ್ಮರಣೀಯವಾಗಿ ಮಾಡಲು ಹೊಸ ವಿಧಾನ ಕಂಡುಹಿಡಿದ ಜೋಡಿಯೊಂದು ಇದೀಗ ಜಾಲತಾಣದ ತುಂಬ ಸಕತ್‌ ಸುದ್ದಿಯಾಗಿದೆ. ಇದು ವಿಭಿನ್ನ ಮದುವೆ ಎಂದಲ್ಲ, ಬದಲಿಗೆ ಆಗಿರುವ ಅವಘಡದಿಂದ.

ಆಗಿದ್ದೇನೆಂದರೆ, ಸುತ್ತಲೂ ಬೆಂಕಿ ಹಾಕಿದ್ದ ರಿಂಗ್‌ ಒಳಗೆ ವಧು-ವರರು ನಿಂತುಕೊಂಡಿದ್ದರು. ಮೇಲಿನಿಂದ ಕೆಳಕ್ಕೆ ಇಳಿದು ಬರುವ ಸನ್ನಿವೇಶವಿದು. ಈ ಅಪರೂಪದ ದೃಶ್ಯ ನೋಡಲು ನೂರಾರು ಅತಿಥಿಗಳು ಕಾಯುತ್ತಾ ಇದ್ದರು. ಬ್ಯಾಕ‌ಗ್ರೌಂಡ್‌ನಲ್ಲಿ ಮ್ಯೂಸಿಕ್‌ ಕೂಡ ಹಾಕಲಾಗಿತ್ತು.

ಆದರೆ ಈ ಜೋಡಿಯ ದುರಾದೃಷ್ಟ. ಆ ರಿಂಗ್‌ ಕೆಳಕ್ಕೆ ಇಳಿಯುತ್ತಿದ್ದಂತೆಯೇ ಇಬ್ಬರೂ ಆಯತಪ್ಪಿ ತಲೆಕೆಳಗಾಗಿ ಬಿದ್ದುಬಿಟ್ಟಿದ್ದಾರೆ. ಕೂಡಲೇ ಅಲ್ಲಿದ್ದವರು ಕಿರುಚಿಕೊಂಡಿದ್ದಾರೆ. ಅಲ್ಲಿಗೇ ವಿಡಿಯೋ ಕಟ್‌ ಆಗಿದೆ.
ಆದರೆ ಅದೃಷ್ಟಕ್ಕೆ ಮದುಮಕ್ಕಳಿಗೆ ಭಾರಿ ಅನಾಹುತ ಸಂಭವಿಸಿಲ್ಲ, ಚಿಕ್ಕಪುಟ್ಟ ಗಾಯಗಳಷ್ಟೇ ಆಗಿವೆ ಎಂದು ವರದಿಯಾಗಿದೆ. ತಾಂತ್ರಿಕ ದೋಷದಿಂದ ಈ ಸಮಸ್ಯೆ ಸಂಭವಿಸಿರುವುದಾಗಿ ಹೇಳಲಾಗಿದೆ. ಬಂದಿರುವ ಅತಿಥಿಗಳ ಮುಂದೆ ಮದುವೆಯನ್ನು ಸ್ಮರಣೀಯ ಮಾಡಲು ಹೋದ ಜೋಡಿ, ಇದೀಗ ಸಾಮಾಜಿಕ ಜಾಲತಾಣದ ಮೂಲಕ ನಿರೀಕ್ಷೆಗೂ ಮೀರಿ ವೈರಲ್‌ ಆಗಿದ್ದಾರೆ!

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net