ತಾಲಿಬಾನಿಗಳ ಹಾದಿಯಲ್ಲಿ ಪಾಕಿಸ್ತಾನ- ಹೆಣ್ಣುಮಕ್ಕಳಿಗೆ ಶುರುವಾಯ್ತು ನಿಷೇಧಗಳ ಹೇರಿಕೆ...

pakistan
Published on

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಕ್ರಮಿಸುತ್ತಿದ್ದಂತೆಯೇ ಮಹಿಳೆಯರ ಮೇಲೆ ಇನ್ನಿಲ್ಲದ ಹೇರಿಕೆ, ಅತ್ಯಂತ ಕ್ರೂರ ಎನಿಸುವಂಥ ಷರತ್ತುಗಳನ್ನು ವಿಧಿಸಿರುವುದು ಈಗ ಜಗಜ್ಜಾಹೀರವಾಗಿದೆ. ಜತೆಗೆ ತಾಲಿಬಾನಿಗಳು ಪುರುಷರಿಗೂ ಕೆಲವೊಂದು ಷರತ್ತು ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಾಲಿಬಾನಿಗಳ ಹಾದಿಯನ್ನು ಪಾಕಿಸ್ತಾನ ತುಳಿಯಲು ಶುರು ಮಾಡಿದ್ದು, ಹೇರಿಕೆಗಳಿಗೆ ಮುನ್ನುಡಿ ಬರೆಯುತ್ತಿದೆ.

ಪಾಕಿಸ್ತಾನದ ಫೆಡರಲ್ ಆಫ್‌ ಎಜುಕೇಶನ್ (ಎಫ್‍ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿದೆ. ಈ ರೀತಿ ಬಟ್ಟೆ ತೊಟ್ಟು ಬಂದ ಶಿಕ್ಷಕರನ್ನು ನಿಷೇಧಿಸಲಾಗುವುದು ಎಂದು ಹೇಳಿದೆ. ಸರಳವಾದ, ಶಿಸ್ತಿನಿಂದ ಇರುವ ಸಲ್ವಾರ್​ ಕಮೀಜ್​, ಪೈಜಾಮಾ ಮಾದರಿಯ ಪ್ಯಾಂಟ್​, ಸಡಿಲವಾದ ಶರ್ಟ್​ ತೊಡಬೇಕು. ಮಹಿಳೆಯರು ದುಪ್ಪಟ್ಟಾ, ಶಾಲುಗಳನ್ನು ಧರಿಸಲೇಬೇಕು. ಹಿಜಾಬ್​, ಬುರ್ಖಾ ಕಡ್ಡಾಯ. ಚಳಿಗಾಲಲ್ಲಿ ಸ್ವೆಟರ್​, ಬ್ಲೇಜರ್​, ಕೋಟ್​ ಇತ್ಯಾದಿಗಳನ್ನು ಧರಿಸಬಹುದು ಎಂದು ಹೇಳಿದೆ.

ಈ ಕುರಿತು ಈ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ ನಿರ್ದೇಶಕರು ಸೋಮವಾರ ಪತ್ರವನ್ನು ಕಳುಹಿಸಿದ್ದಾರೆ. ಇದು ಸದ್ಯ ಶಿಕ್ಷಕರಿಗೆ ಮಾತ್ರ ಅನ್ವಯ ಆಗಲಿದ್ದು, ತಾಲಿಬಾನಿಗಳಂತೆ ಇನ್ನು ಏನೇನು ಕಟ್ಟುಪಾಡುಗಳನ್ನು ಹೆಣ್ಣುಮಕ್ಕಳಿಗೆ ಪಾಕಿಸ್ತಾನ ಹೇರಲಿದೆಯೋ ಎಂಬ ಭಯದಲ್ಲಿದ್ದಾರೆ ಇಲ್ಲಿಯ ಪ್ರಜೆಗಳು.

ಇದರ ಜತೆಗೆ ಪುರುಷರಿಗೂ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದ್ದು, ಅವರು ಕೂಡ ಜೀನ್ಸ್‌ ಮತ್ತು ಟೀ ಷರ್ಟ್‌ ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ. ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಪ್ರತಿ ಸಿಬ್ಬಂದಿಯು ವೈಯಕ್ತಿಕ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ತಿಳಿಸಲಾಗಿದೆ.

ಕ್ಷೌರ ಮಾಡಬೇಕು, ಗಡ್ಡಗಳನ್ನು ಆಗಾಗ ಟ್ರಿಮ್​ ಮಾಡಿ, ಶಿಸ್ತಿನಿಂದ ಇಟ್ಟುಕೊಳ್ಳಬೇಕು, ತಲೆಕೂದಲು ಬಿಡುವಂತಿಲ್ಲ, ಉಗುರು ಕತ್ತರಿಸಿಕೊಳ್ಳಬೇಕು, ಸ್ನಾನ ಮಾಡಬೇಕು, ಸುಗಂಧ ದ್ರವ್ಯ ಬಳಸಬೇಕು ಎಂಬಿತ್ಯಾದಿಯಾಗಿ ಪತ್ರದಲ್ಲಿ ವಿವರಿಸಲಾಗಿದೆ. ಶಿಕ್ಷಕರು ತಮ್ಮ ಶಾಲಾ ಅವಧಿಯಲ್ಲಿ, ಶಾಲಾ-ಕಾಲೇಜುಗಳ ಕ್ಯಾಂಪಸ್​​ನಲ್ಲಿ ಇನ್ಯಾವುದೇ ಕಾರಣಕ್ಕೆ ಇದ್ದಾಗ ಮತ್ತು ಸಭೆಗಳಲ್ಲಿ ಪಾಲ್ಗೊಳ್ಳುವಾಗ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಇದೇ ರೀತಿ ತಾಲಿಬಾನಿಗಳೂ ಕೂಡ ಪುರುಷರಿಗೆ ಷರತ್ತು ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net