More

    ಅಫ್ಘಾನ್‌ನಲ್ಲಿ ಉಗ್ರರ ವಿರುದ್ಧ ಸಿಡಿದೆದ್ದ ಮಹಿಳೆಯರು- ಪಾಕಿಸ್ತಾನದಲ್ಲಿ ಪ್ರಜೆಗಳ ಗಡಿಪಾರು!

    ಇಸ್ಲಾಮಾಬಾದ್‌: ಅಪ್ಘಾನಿಸ್ತಾನದಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸಿದೆ. ಹೆಣ್ಣುಮಕ್ಕಳನ್ನು ತಾಲಿಬಾನಿಗಳು ಪ್ರಾಣಿಗಳಂತೆ ಹಿಂಸಿಸುತ್ತಾ, ಅವರ ಮೇಲೆ ಅತ್ಯಾಚಾರ, ಅನಾಚಾರ ನಡೆಸುತ್ತಾ ಅವರ ಮೇಲೆ ಆಕ್ರಮಣ ಮಾಡುತ್ತಿರುವ ಘಟನೆಗಳಿಗಂತೂ ಲೆಕ್ಕವೇ ಇಲ್ಲ. ಈ ರಕ್ಕಸರ ಕಪಿಮುಷ್ಠಿಗೆ ಸಿಲುಕಿ ನಲಗು ಹೋಗಿರುವ, ಜೀವನ್ಮರಣಗಳ ಮಧ್ಯೆ ಹೋರಾಡುತ್ತಿರುವ ಹೆಣ್ಣುಮಕ್ಕಳು ಅಸಂಖ್ಯ.

    ಈ ಎಲ್ಲ ಕ್ರೌರ್ಯದ ನಡುವೆಯೇ ಹೆಣ್ಣುಮಕ್ಕಳು ರಣಚಂಡಿ ಅವತಾರ ತಾಳಿದ್ದಾರೆ. ತಾಲಿಬಾನಿಗಳು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತಿದ್ದಾರೆ. ತಾಲಿಬಾನಿಗಳ ಗುಂಡಿಗೂ ಬಗ್ಗದೇ, ಜಗ್ಗದೇ ಅವರ ಬಂದೂಕಿಗೆ ಎದೆಯೊಡ್ಡಿ ಬೀದಿಗಿಳಿದಿದ್ದಾರೆ. ಇವರ ಮುಖ್ಯ ಘೋಷಣೆ ಪಾಕಿಸ್ತಾನದ ವಿರುದ್ಧ. ಅಫ್ಘಾನಿಸ್ತಾನದಲ್ಲಿ ಇಷ್ಟು ವರ್ಷ ಸ್ವತಂತ್ರವಾಗಿ ಎಲ್ಲ ರಂಗಗಳಲ್ಲಿಯೂ ಬಹುಕಷ್ಟದಲ್ಲಿ ಮುಂದೆ ಬಂದು ಗುರುತಿಸಿಕೊಂಡಿರುವ ವನಿತೆಯರು ಇದೀಗ ಮಾಡು ಇಲ್ಲವೇ ಮಡಿ ಎನ್ನುತ್ತಾ ಪಾಕಿಗಳ ಹಾಗೂ ತಾಲಿಬಾನಿಗಳ ವಿರುದ್ಧ ಸಿಡಿದೆದ್ದು ನಿಂತಿದ್ದಾರೆ.

    ಪಾಕಿಸ್ತಾನ, ಅದರ ಗುಪ್ತಚರ ಸಂಸ್ಥೆ ಐಎಸ್​ಐ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಾರೆ. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ತಾಲಿಬಾನಿಗಳು ಮಹಿಳೆಯರ ಮೇಲೆ ಗುಂಡು ಹಾರಿಸುತ್ತಿದ್ದರೂ ಅದನ್ನು ಮಹಿಳೆಯರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನದ ವಿರೋಧಿ ಘೋಷಣೆ ಕೂಗುತ್ತಿದ್ದು ಅಂಥ ಪ್ಲೇಕಾರ್ಡ್​ಗಳನ್ನೇ ಹಿಡಿದುಕೊಂಡಿದ್ದಾರೆ. ಕಾಬುಲ್‌ನಿಂದ ಹಿಡಿದು ಬಲ್ಖ್​ ಪ್ರಾಂತ್ಯದವರೆಗೆ ಮಹಿಳೆಯರ ಪ್ರತಿಭಟನೆ ಸಾಗಿದೆ. ಇವರಿಗೆ ಪುರುಷರೂ ಸಾಥ್‌ ನಿಡಿದ್ದಾರೆ. ‘ಪಾಕಿಸ್ತಾನ ನಾಶವಾಗಲಿ’ ‘ಐಎಸ್​ಐ ನಾಶವಾಗಲಿ’ ಎಂದು ಘೋಷಣೆ ಕೂಗುತ್ತಿದ್ದಾರೆ.

    ಮಹಿಳೆಯರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಇದೀಗ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿಕೆ ಬಿಡುಗಡೆ ಮಾಡಿದ್ದು, ಈಗ ನಡೆಯುತ್ತಿರುವಂತೆ ಅಫ್ಘನ್ ನಾಯಕರ ನಿಂದನೆಗೆ ಅವಕಾಶವಿಲ್ಲ. ಯಾರೂ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಕೂಡದು. ಸಂಘರ್ಷದ ವಾತಾವರಣ ಸೃಷ್ಟಿಸಿ ಅದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಯಾವ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನೂ ಮೊದಲೇ ತಿಳಿಸಬೇಕು ಎಂದಿದ್ದಾರೆ.



    ಅಫ್ಘಾನ್‌ ಪ್ರಜೆಗಳ ಗಡಿಪಾರು: ಆದರೆ ಅದೇ ಇನ್ನೊಂದೆಡೆ, ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಪಾಕಿಸ್ತಾನವು ಮಹಿಳೆಯರು, ಮಕ್ಕಳು ಸೇರಿದಂತೆ 200 ಅಫ್ಘನ್‌ ಪ್ರಜೆಗಳನ್ನು ಗಡಿಪಾರು ಮಾಡಿದೆ. ವಿವಿಧ ಭಾಗಗಳಿಂದ ಪಾಕಿಸ್ತಾನದೊಳಗೆ ಪ್ರವೇಶಿಸಿದ ಈ ಎಲ್ಲರೂ ಚಮನ್‌ನ ರೈಲ್ವೆ ಸ್ಟೇಷನ್‌ನಲ್ಲಿ ಉಳಿದುಕೊಂಡಿದ್ದರು. ಜೀವ ಭಯದಿಂದ ಅಲ್ಲಿಯೇ ನೆಲೆಸಿದ್ದರು. ಆದರೆ ಅವರನ್ನೀಗ ಪಾಕಿಸ್ತಾನ ಗಡಿಪಾರು ಮಾಡಿದೆ.

    ಮಹಿಳೆಯರು, ಮಕ್ಕಳು ಎಂದು ನೋಡದೇ ಇಲ್ಲಿ ಇರುವ ಎಲ್ಲ ನಿರಾಶ್ರಿತರನ್ನು ಪಾಕಿಸ್ತಾನದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಅವರು ಕಾನೂನುಬಾಹಿರವಾಗಿ ವಾಸವಾಗಿದ್ದರಿಂದ ಅವರನ್ನು ವಾಪಸ್ ಕಳುಹಿಸಲಾಗಿದೆ, ವೀಸಾ ಸೇರಿದಂತೆ ಇತರೆ ದಾಖಲೆಗಳಿಲ್ಲದ ಅಫ್ಘನ್‌ ಪ್ರಜೆಗಳಿಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಕ್ವೆಟ್ಟಾ ವಿಭಾಗದ ಆಯುಕ್ತ ಸೊಹೈಲ್ ಉರ್ ರೆಹಮಾನ್ ಬಲೂಚ್ ಹೇಳಿದ್ದಾರೆ.

     

    ‘ಹುಲಿ ಎರಡು ಹೆಜ್ಜೆ ಹಿಂದೆ ಹೋದರೆ ಅದು ಬೇಟೆಗಾಗಿ… ತಾಲಿಬಾನಿಗಳ ಜತೆ ಪಾಕಿಗಳಿಗೂ ಬುದ್ಧಿಕಲಿಸುವೆ’

    ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts