

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದ ವಿಷಯಗಳನ್ನು ಶೇರ್ ಮಾಡುವುದನ್ನು ಕೆಲವರು ನೋಡಬಾರದು ಎಂದು ಅಂದುಕೊಳ್ಳುವವರು ಅನೇಕರು. ಅದರಲ್ಲಿಯೇ ಅಪ್ಪ-ಅಮ್ಮ ಸೇರಿದಂತೆ ಸಂಬಂಧಿಕರಿಗೆ ತಮ್ಮ ಜಾಲತಾಣದ ಸಿಗಬಾರದು ಎಂದುಕೊಂಡು ಅವರನ್ನು ಬ್ಲಾಕ್ ಮಾಡುತ್ತಾರೆ. ಹೀಗೆಯೇ ಮಗನೊಬ್ಬ ಅಪ್ಪನನ್ನೇ ಬ್ಲಾಕ್ ಮಾಡಿ ಪೇಚಿಗೆ ಸಿಲುಕಿರುವ ಘಟನೆ ಇದು.
ಇಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಫೇಸ್ಬುಕ್ ಖಾತೆಯಿಂದ ಬ್ಲಾಕ್ ಮಾಡಿದ್ದ. ಇದು ಅಪ್ಪನಿಗೆ ತಿಳಿಯಿತು. ಮಗನಿಗೆ ಬುದ್ಧಿ ಕಲಿಸಲು ಯುವತಿಯೊಬ್ಬಳ ಹೆಸರಿನಲ್ಲಿ, ಒಂದು ಸುಂದರಿಯ ಫೋಟೋ ಹಾಕಿಕೊಂಡು ಫೇಕ್ ಅಕೌಂಟ್ ಸೃಷ್ಟಿ ಮಾಡಿ ಮಗನ ಜತೆ ಚಾಟ್ ಮಾಡತೊಡಗಿದ. ಈ ಯುವತಿಯನ್ನು ನೋಡಿ ಮಗ ಮನಸೋತು ಗಾಢವಾಗಿ ಪ್ರೀತಿಸಲು ಶುರು ಮಾಡಿದ.
ಹೀಗೆ ಅನೇಕ ತಿಂಗಳು ಇಬ್ಬರ ನಡುವೆ ಪ್ರೀತಿ, ಪ್ರೇಮದ ಸಂಭಾಷಣೆ, ಕೆಲವು ಫೋಟೋಗಳ ಹಂಚಿಕೆ ಎಲ್ಲವೂ ನಡೆಯಿತು. ಆ ಯುವತಿಯನ್ನು ಭೇಟಿ ಮಾಡುವ ಇಚ್ಛೆಯನ್ನು ಮಗ ವ್ಯಕ್ತಪಡಿಸಿದಾಗ ಕೊನೆಗೆ ಮಗನಿಗೆ ತಿಳಿದದ್ದು ಈ ಯುವತಿ ತನ್ನ ಅಪ್ಪನೇ ಎಂದು!
ಇದು ಇತ್ತೀಚಿಗೆ ಬಿಡುಗಡೆಯಾದ "ಐ ಲವ್ ಮೈ ಡ್ಯಾಡ್" ಎಂಬ ಹಾಲಿವುಡ್ ಚಿತ್ರದ ಕಥೆ. 31 ವರ್ಷದ ಜೇಮ್ಸ್ ಮೊರೋಸಿನ್ ಎಂಬ ನಿರ್ಮಾಪಕ ಈ ಚಿತ್ರವನ್ನು ತೆಗೆದಿದ್ದು, ಇದರಲ್ಲಿ ಬೆಕ್ಕಾ ಎಂಬ ಹುಡುಗಿಯನ್ನು ಹೀರೋ ಲವ್ ಮಾಡುವ ಕಥೆ ಇದೆ. ಆದರೆ ಅಸಲಿಗೆ ಇದು ಸಿನಿಮಾ ಕಥೆಯಲ್ಲ, ಬದಲಿಗೆ ಜೇಮ್ಸ್ ಮೊರೋಸಿನ್ನ ನೈಜ ಕಥೆ.
ಈ ಕುರಿತು ಜೇಮ್ಸ್ ಮೊರೋಸಿನ್ ಈಗ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇದು ನನ್ನದೇ ಕಥೆ. ನನ್ನ ಅಪ್ಪನನ್ನು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದ ಬಳಿಕ ಬೆಕ್ಕಾ ಎಂಬ ಯುವತಿಯ ಹೆಸರಿನಲ್ಲಿ ಖಾತೆ ತೆರೆದು ಚಾಟ್ ಮಾಡಲು ಶುರು ಮಾಡಿದ್ದರು. ನಾನು ನಿಜಕ್ಕೂ ಹುಡುಗಿಯೇ ಎಂದುಕೊಂಡು ಲವ್ ಮಾಡಿದ್ದೆ. ಕೊನೆಗೆ ನಿಜ ಗೊತ್ತಾಗಿ ಆಕಾಶವೇ ಕಳಚಿ ಬಿದ್ದಂತಾಯಿತು ಎಂದಿದ್ದಾರೆ.
ಆದ್ದರಿಂದ ಯಾವುದೇ ಹುಡುಗಿಯ ಪ್ರೊಫೈಲ್ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಸರಿಯಾಗಿ ಪರಿಶೀಲಿಸಿ ಮುಂದುವರೆಯಿರಿ, ಇಲ್ಲದಿದ್ದರೆ ನನ್ನ ಕಿಲಾಡಿ ಅಪ್ಪನಂಥವರೂ ಇರುತ್ತಾರೆ ಎಂದು ಜೇಮ್ಸ್ ಮೊರೋಸಿನ್ ಚಟಾಕಿ ಹಾರಿಸಿದ್ದಾರೆ.