'ಹಿಂದೂಗಳಲ್ಲದವರಿಗೆ ಅವಕಾಶ ಕೊಡಬಾರ್ದು ಅಂತ ನಿಮ್​ ಕಾಂಗ್ರೆಸ್​ನವರೇ ಮಾಡಿರೋ ರೂಲ್ಸ್​ ಇಲ್ಲಿದೆ ನೋಡ್ಕೋಳಿ...'

sadana
Published on

ಬೆಂಗಳೂರು: ಹಿಂದೂಯೇತರ ವ್ಯಾಪಾರಸ್ಥರಿಗೆ ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಪ್ರಕ್ರಿಯೆ ಮುಂದುವರೆದಿದೆ. ಕರಾವಳಿಯ ಕಾಪು ಜಾತ್ರೆಯಲ್ಲಿ ಶುರುವಾದ ಈ ಪದ್ಧತಿ, ಇದೀಗ ರಾಜ್ಯದ ಎಲ್ಲೆಡೆ ಹರಡಿದ್ದು, ಹಿಂದೂಯೇತರ ವ್ಯಾಪಾರಸ್ಥರಿಗೆ ನಿಷೇಧ ಹೇರಲಾಗಿದೆ.

ಹೈಕೋರ್ಟ್​ ಆದೇಶವನ್ನು ಧಿಕ್ಕರಿಸಿ ಶಾಲಾ-ಕಾಲೇಜುಗಳಲ್ಲಿ ಗಲಾಟೆ ಎಬ್ಬಿಸುತ್ತಿರುವವರಿಗೆ, ಕುಂಕುಮ- ಬೊಟ್ಟು ಹಾಕಿಕೊಂಡು ಶಾಲಾ-ಕಾಲೇಜುಗಳಿಗೆ ಬರಬೇಡಿ ಎನ್ನುವವರಿಗೆ ಇವುಗಳನ್ನು ಮಾರಾಟ ಮಾಡುವ ಅಧಿಕಾರ ಇಲ್ಲ ಎಂದು ಹಿಂದೂ ವ್ಯಾಪಾರಿಗಳು ಕಿಡಿ ಕಾರುತ್ತಾ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವ ಮುಸ್ಲಿಂ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ಸಿಲುಕಿದೆ.

ಈ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇಂದು ಸದನದಲ್ಲಿ ಕೂಡ ಭಾರಿ ಕೋಲಾಹಲವೇ ಸೃಷ್ಟಿಯಾಯಿತು. ಕಾಂಗ್ರೆಸ್​ ಮುಖಂಡರು, ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಗರಂ ಆದರು. ಮಾಜಿ ಸಚಿವ ಯುಟಿ ಖಾದರ್ , ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕೆಲ ಧರ್ಮದವರಿಂದ ಬ್ಯಾನರ್ ಹಾಕಲಾಗಿದೆ. ಬ್ಯಾನರ್ ಹಾಕಿದವರು ಹೇಡಿಗಳು ಕ್ರೂರಿಗಳು ಎಂದರು. ಇದಾದ ಮೇಲೆ ಎರಡೂ ಪಕ್ಷಗಳ ಮುಖಂಡರ ನಡುವೆ ಜಟಾಪಟಿಯೇ ಉಂಟಾಯಿತು.

ಕೊನೆಗೆ, ಕಾಂಗ್ರೆಸ್​ ಮುಖಂಡರ ಬಾಯಿ ಮುಚ್ಚಿಸಿದ್ದು, ಕಾನೂನು ಸಚಿವ ಮಾಧುಸ್ವಾಮಿ ಅವರ ಮಾತು. ಅದೇನೆಂದರೆ 2002ರ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನ್ನು ಉಲ್ಲೇಖಿಸಿದ ಸಚಿವರು, ಇಲ್ಲಿ ನೋಡಿ. ಇದೇನು ಬಿಜೆಪಿ ಮಾಡಿದ ಕಾಯ್ದೆ- ಕಾನೂನು ಅಲ್ಲ. ನಿಮ್ಮದೇ ಕಾಂಗ್ರೆಸ್​ನವರು ಮಾಡಿದ್ದು. ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಈ ಕಾಯ್ದೆಯಲ್ಲಿ ಹೇಳಿದೆ. ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಎಂದೂ ಇದೇ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ದೇವಸ್ಥಾನದ ಆವರಣ ಬಿಟ್ಟು ಹೊರಗಡೆ ಆದರೆ ಅದನ್ನು ಸರಿಪಡಿಸಬಹುದು ಅಷ್ಟೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net