ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 51 ಅಡಿಯ ಬೃಹತ್‌ ಪ್ರತಿಮೆ: ಬಂದಿಳಿಯಿತು 100 ಟನ್ ತೂಕದ ಶಿಲೆ

rambhapuri
Published on

ಚಿಕ್ಕಮಗಳೂರು: ಪಂಚಪೀಠಗಳಲ್ಲೇ ಮೊದಲ ಪೀಠವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಅವರ ಬೃಹತ್‌ ಪ್ರತಿಮೆ ನಿರ್ಮಾಣವಾಗಲಿದೆ. 100 ಟನ್ ತೂಕವುಳ್ಳ 20 ಅಡಿ ಉದ್ದವಿರುವ ಬೃಹತ್ ಶಿಲೆಯ 51 ಅಡಿ ಎತ್ತರದ ಈ ಪ್ರತಿಮೆ ಇದ್ದಾಗಿದ್ದು, ಈ ಬೃಹತ್‌ ಶಿಲೆಯು ಇದಾಗಲೇ ರಂಭಾಪುರಿ ಮಠದ ಆವರಣ ತಲುಪಿದೆ.  8 ಕೋಟಿಗೂ ಅಧಿಕ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. 

ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಈ ಪ್ರತಿಮೆ ನಿರ್ಮಾಣಕ್ಕೆ ಶಿಲೆ ತೆಗೆದುಕೊಳ್ಳಲಾಗಿದೆ. ಒಟ್ಟು 350 ಕಿ.ಮೀ. ದೂರದ ಆಂಧ್ರಪ್ರದೇಶದ ಮಡಕಶಿರಾದಿಂದ ಬಾಳೆಹೊನ್ನೂರಿಗೆ ಕಲ್ಲನ್ನು ತರಲಾಗಿದೆ. ಆಂಧ್ರದ ಮಡಕಶಿರಾದಿಂದ ಹೊರಟ ಕಲ್ಲು ಐದು ದಿನಗಳ ನಿರಂತರ ಪ್ರಯಾಣದ ವೇಳೆ ಪಾವಗಡ, ಮಧುಗಿರಿ, ತುಮಕೂರು, ತಿಪಟೂರು, ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಬಂದು ಬಾಳೆಹೊನ್ನೂರು ತಲುಪಿದೆ.

ಇದೇ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಲಾರಿಯಲ್ಲಿ ಹೊರಟ ಈ ಶಿಲೆ ಐದು ದಿನಗಳ ಬಳಿಕ ಮಠಕ್ಕೆ ಆಗಮಿಸಿದ್ದು ಪ್ರತಿಷ್ಠಾಪನೆಗೆ ಸಂಪೂರ್ಣ ಸಿದ್ಧತೆ ನಡೆದಿದೆ. ಈ ಪ್ರತಿಮೆಯನ್ನು ಸಾಗಿಸುವ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ. ಇದರ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಶ್ರೀಧರಬಾಬು ವಹಿಸಿದ್ದಾರೆ.

ಶಿಲಾಮೂರ್ತಿ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ ಎರಡೂ ಶಿಲೆಗಳು ಶೀಘ್ರವೇ ಮಠಕ್ಕೆ ಬರಲಿವೆ. ಯಂತ್ರಗಳ ಬಳಕೆಯಿಂದ ಕಲ್ಲನ್ನು ಅನ್ ಲೋಡ್ ಮಾಡಲು ಮುಂದಾಗುವುದರಿಂದ ಕಲ್ಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ 16 ಕಾರ್ಮಿಕರು ಬಳಸಿ ಲಾರಿಯಿಂದ ಅನ್ ಲೋಡ್ ಮಾಡಲಾಗುವುದು ಎಂದಿದ್ದಾರೆ ಶ್ರೀಧರಬಾಬು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net