

ಭಿಲ್ವಾರ್ (ರಾಜಸ್ಥಾನ): ಮದುವೆಯಾದ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆಯನ್ನು ನಡೆಸುವಂಥ ಅತ್ಯಂತ ಕಠೋರ ಸಂಪ್ರದಾಯ ರಾಜಸ್ಥಾನದ ಕೆಲವು ಜನಾಂಗಗಳಲ್ಲಿ ಇವೆ. ಇದೇ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ನವ ವಿವಾಹಿತೆಯೊಬ್ಬಳಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿರುವ ಆತಂಕಕಾರಿ ಘಟನೆಯೊಂದು ರಾಜಸ್ಥಾನದ ಭಿಲ್ವಾರ್ನಲ್ಲಿ ನಡೆದಿದೆ.
ಭಿಲ್ವಾರ್ ಗ್ರಾಮದ ಯುವತಿಯ ಮದುವೆ ಈಚೆಗೆ ನಡೆದಿತ್ತು. ಮದುವೆಯ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಯುವತಿ ಫೇಲ್ ಆಗಿದ್ದಾಳೆ, ಇದರ ಅರ್ಥ ಆಕೆಗೆ ಇದಾಗಲೇ ಲೈಂಗಿಕ ಕ್ರಿಯೆ ನಡೆದಿದೆ ಎನ್ನುವುದು (ಎಷ್ಟೋ ಸಂದರ್ಭದಲ್ಲಿ ಕ್ರೀಡಾ ಪಟುಗಳು, ಯಕ್ಷಗಾನ ಕಲಾವಿದರು ಸೇರಿದಂತೆ ಕೆಲವು ಯುವತಿಯರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ಕನ್ಯಾಪೊರೆ ತಾನಾಗಿಯೇ ಹರಿದಿರುತ್ತದೆ, ಇದರ ಅರ್ಥ ಆಕೆ ಮದುವೆಗೆ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದಲ್ಲ).
ಕನ್ಯತ್ವ ಪರೀಕ್ಷೆ ಹೇಗೆ ನಡೆಯುತ್ತದೆ ಎಂದರೆ, ತಾನು ಕನ್ಯೆ ಎಂದು ವಧು ಮೊದಲ ರಾತ್ರಿ ಸಾಬೀತು ಪಡಿಸಬೇಕಾಗುತ್ತದೆ. ಇದಕ್ಕೆ ಮೊದಲ ರಾತ್ರಿ ಸಂಭೋಗ ನಡೆಸಿದ ನಂತರ ಕನ್ಯಾಪೊರೆ ಹರಿದು ರಕ್ತ ಬರಬೇಕು. ಬಿಳಿಯ ಹಾಸಿಗೆಯ ಮೇಲೆ ರಕ್ತದ ಕಲೆ ಕಾಣಿಸಬೇಕು. ಈ ರಕ್ತವನ್ನು ಬೆಳಗ್ಗೆ ಗ್ರಾಮದ ಎಲ್ಲರಿಗೂ ತೋರಿಸಲೇಬೇಕು! ಹೀಗೆ ಆದರೆ ಮಾತ್ರ ಆಕೆ ಶೀಲವಂತೆ ಎಂದು. ಇದಾದ ಮೇಲೆ ಗಂಡನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಒಂದು ವೇಳೆ ರಕ್ತದ ಕುರುಹು ಇಲ್ಲದಿದ್ದರೆ ಯುವತಿ ಈ ಮೊದಲು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಗಿ ನಂಬಲಾಗುತ್ತದೆ.
ಒಂದು ವೇಳೆ ರಕ್ತ ಬರದಿದ್ದರೆ, ಪಂಚಾಯ್ತಿ ಸೇರಿಸಿ ಆಕೆಯನ್ನು ಮನೆಯಿಂದ ಹೊರಹಾಕುವ ಅಥವಾ ಹೆಚ್ಚಿನ ವರದಕ್ಷಿಣೆ ಕೇಳುವ ಕೆಲಸ ಮಾಡಲಾಗುತ್ತದೆ, ಇಲ್ಲವೇ ಸಮುದಾಯದಿಂದಲೇ ಬಹಿಷ್ಕಾರ ಹಾಕುವ ಘಟನೆಗಳೂ ನಡೆಯುತ್ತಲೇ ಇವೆ.
ಈ ಘಟನೆಯಲ್ಲಿ ಯುವತಿಯ ಕನ್ಯಾಪೊರೆ ಮೊದಲೇ ಹರಿದಿದ್ದ ಹಿನ್ನೆಲೆಯಲ್ಲಿ ಆಕೆಯ ಮೇಲೆ ತೀವ್ರವಾಗಿ ಹಿಂಸೆ ನಡೆಸಲಾಗಿದೆ. ಪತಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿದ ನಂತರ ಮದುವೆಗೆ ಮುನ್ನ ತನ್ನ ಮೇಲೆ ಅತ್ಯಾಚಾರ ಆಗಿರುವ ವಿಷಯವನ್ನು ಯುವತಿ ಬಹಿರಂಗಗೊಳಿಸಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ಗಂಡನ ಮನೆಯವರು ಆಕೆಯನ್ನು ಮನೆಯಿಂದ ಹೊರದಬ್ಬಿ ಪಂಚಾಯಿತಿ ಸೇರಿಸಿದ್ದಾರೆ. ಪಂಚಾಯಿತಿಯಲ್ಲಿ ಯುವತಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಂತರ ಯುವತಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ನ್ಯಾಯಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಮನವಿ ಸಲ್ಲಿಸಿದ್ದಾಳೆ.
ಇದೀಗ ಪತಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ ಪೊಲೀಸರು. (ಏಜೆನ್ಸೀಸ್)