‘ನಾನು ರಾಯಚೂರು ಬಾದ್‌ಶಾ ಗೊತ್ತಾ’ ಎಂದು ಗದರಿದ ಶಾಸಕ: ‘ಸೇವಕ’ ಅಂತ ವೋಟ್‌ಗೆ ಬನ್ನಿ, ಆಗಿದೆ ಎಂದ ಜನರು!

patil
Published on

ರಾಯಚೂರು: ನಾನು ರಾಯಚೂರಿನ ಬಾದ್‌ಶಾ ಇದ್ದೀನಿ. ನಾನು ಇಲ್ಲೇ ಇರ್ತೀನಿ. ನನ್ನ ಅಧಿಕಾರದಲ್ಲಿ ಏನೇನ್ ಚಲಾಯಿಸಬೇಕೋ ಅದು ನನಗೆ ಗೊತ್ತಿದೆ, ನೀವು ಹೇಳ್ಕೋಡೋದು ಬೇಡ ತಿಳೀತಾ ಎಂದು ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್ ಮಹಿಳೆಗೆ ಗದರಿದ್ದು ಇದೀಗ ಜನರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಮತದಾರರೆಲ್ಲಾ ಶಾಸಕರ ವಿರುದ್ಧ ಭಾರಿ ಗರಂ ಆಗಿದ್ದಾರೆ. ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಗೆ ಮಾತನಾಡಿಸುವುದನ್ನು ಬಿಟ್ಟು, ಅವರ ಮೇಲೆ ಶಾಸಕ ಗದರಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಮಹಿಳೆ ಸಮಸ್ಯೆ ಹೇಳಿಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ಶಾಸಕ ಸಿಟ್ಟಿನಲ್ಲೇ ಗದರಿದ್ದಾರೆ.

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಅನ್ನೋ ಹೇಳಿಕೆಯಿಂದ ಈ ಹಿಂದೆ ಇದೇ ಶಾಸಕ ವಿವಾದ ಸೃಷ್ಟಿಸಿದ್ದರು. ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಕೌನ್ಸೆಲರ್‌ ಅವರಿಂದ ಕೆಲಸ ಮಾಡಿಸಿಕೊಡಲು ಹೇಳಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಕ್ಕೆ, ಕೌನ್ಸೆಲರ್ ಅವರ ಕೆಲಸ ಅವರು ಮಾಡ್ತಾರೆ ನನ್ನ ಕೆಲಸ ನಾನು ಮಾಡ್ತೀನಿ, ನಾನು ರಾಯಚೂರಿನ ಬಾದ್‌ಶಾ ಎಂದಿದ್ದಾರೆ. ನನ್ನ ಅಧಿಕಾರದಲ್ಲಿ ಏನೇನ್ ಚಲಾಯಿಸಬೇಕೋ ಅದು ನನಗೆ ಗೊತ್ತಿದೆ ಎಂದು ಗರಂ ಆಗಿದ್ದಾರೆ.

ವೋಟು ಕೇಳಲು ಬಂದಾಗ ಸೇವಕ ಎಂದು ಹೇಳಿಕೊಂಡಿದ್ದ ಈ ಶಾಸಕ, ಇದೀಗ ಬಾದ್‌ಶಾ ಎಂದು ಹೇಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜನರು, ಮುಂದೆ ವೋಟು ಕೇಳಲು ಬರಲಿ, ಆಗ ಮಾಡಿಸುತ್ತೇವೆ ಎಂದು ಗರಂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net