VIDEO: ಯುವತಿ ಜತೆ ನೇಪಾಳದ ನೈಟ್​ಕ್ಲಬ್​ನಲ್ಲಿ ರಾಹುಲ್​ ಎಣ್ಣೆ ಪಾರ್ಟಿ? ವಿಡಿಯೋ ನೋಡಿ ತಲ್ಲಣ

1272403
Published on

ಕಠ್ಮಂಡು: ಮೇಲಿಂದ ಮೇಲೆ ವಿದೇಶ ಪ್ರಯಾಣ ಬೆಳೆಸುವ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿಯವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಇತ್ತ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ​ ವಿದೇಶ ಪ್ರವಾಸ ಕೈಗೊಂಡಿದ್ದ ರಾಹುಲ್​ ಗಾಂಧಿ ಅಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂಬ ಬಗ್ಗೆ ಖುದ್ದು ಕಾಂಗ್ರೆಸ್ ವಲಯದಲ್ಲಿಯೂ ಪ್ರಶ್ನೆ ಹುಟ್ಟುಹಾಕಿತ್ತು. ಇದೀಗ ಈ ವಿಡಿಯೋ ಉತ್ತರ ನೀಡಿದೆ!

ಅದೇನೆಂದರೆ ನೇಪಾಳದ ನೈಟ್​ಕ್ಲಬ್​ ಒಂದರಲ್ಲಿ ಮಹಿಳೆಯೊಬ್ಬರ ಜತೆ ರಾಹುಲ್​ ಗಾಂಧಿ ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಇದಾಗಿದೆ. ಇತ್ತ ಕಾಂಗ್ರೆಸ್​ ಭಾರತದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವಾಗ, ಅದರ ಪ್ರಧಾನಿ ಅಭ್ಯರ್ಥಿ ಹೀಗೆ ನೈಟ್​ಕ್ಲಬ್​ನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದು ಮಾತ್ರ ಭಾರಿ ಕೋಲಾಹಲ ಸೃಷ್ಟಿಸಿದೆ.

ಈ ಮಹಿಳೆ ನೇಪಾಳದಲ್ಲಿರುವ ಚೀನಾದ ರಾಯಭಾರಿ ಹೌ ಯಾಂಕಿ ಎನ್ನಲಾಗಿದೆ. ಭಾರತದ ಕಟು ವೈರಿಯಾಗಿರುವ ಈಕೆ, ನೇಪಾಳ-ಭಾರತ ಹಾಗೂ ಪಾಕಿಸ್ತಾನ-ಭಾರತದ ನಡುವೆ ವೈರತ್ವ ತಂದಿಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾಳೆ.

ಭಾರತಕ್ಕೆ ಅತ್ಯಂತ ಸ್ನೇಹಪರ ರಾಷ್ಟ್ರವಾಗಿದ್ದ ನೇಪಾಳ, ಭಾರತದ ವಿರುದ್ಧ ಸಂಚು ಹೂಡುತ್ತಾ, ಈ ಪರಿಯಲ್ಲಿ ವಿರೋಧ ಕಟ್ಟಿಕೊಳ್ಳುವ ಮಟ್ಟಿಗೆ ಬೆಳೆದುನಿಂತಿದ್ದೇಕೆ ಎಂಬ ಬಗ್ಗೆ ತನಿಖೆ ಭಾರತದ ಗುಪ್ತಚರ ಇಲಾಖೆ ಜಾಡು ಹಿಡಿದು ಹೊರಟಾಗ ಕಂಡಿದ್ದು ಚೀನಾದ ಈ ಹೆಣ್ಣು. ನೇಪಾಳ ತನ್ನ ನಕ್ಷೆಯನ್ನೇ ಬದಲಿಸಿ ದಿನದಿಂದ ದಿನಕ್ಕೆ ಭಾರತದ ವೈರತ್ವ ಕಟ್ಟಿಕೊಳ್ಳುವ ಹಿಂದಿರುವುದು ಚೀನಾದ ಈ ಸುಂದರಿ ಎನ್ನುವುದು ಭಾರತದ ಗುಪ್ತಚರ ಇಲಾಖೆಗೆ ತಿಳಿದುಬಂದಿತ್ತು. ಮಾತ್ರವಲ್ಲದೇ, ಪಾಕಿಸ್ತಾನ ಮತ್ತು ಭಾರತದ ನಡುವೆ 1999ರಲ್ಲಿ ಕಾರ್ಗಿಲ್‌ ಯುದ್ಧ ನಡೆಯುವುದಕ್ಕೂ ಈ ಸುಂದರಿಯೇ ಕಾರಣ ಎನ್ನಲಾಗಿದೆ.

ನೇಪಾಳದಲ್ಲಿ ರಾಹುಲ್​ ಗಾಂಧಿ ಮೋಜು ಮಸ್ತಿ ಮಾಡುತ್ತಿರುವ ಮಹಿಳೆ ಈಕೆಯೇ ಎಂಬ ಮಾತು ಕೇಳಿಬಂದಿದೆ. ಇದರ ವಿಡಿಯೋ ಅನ್ನು ನೇಪಾಳದ ಪ್ರಜೆ ಭೂಪೇನ್​ ಕುನ್ವರ್​ ಅವರು ಹಂಚಿಕೊಂಡಿದ್ದಾರೆ. 'ಲಾರ್ಡ್​ ಆಫ್​ ಡ್ರಿಂಕ್ಸ್​' ರಾಹುಲ್​ ಗಾಂಧಿ ಅವರು ನೇಪಾಳದ ಕಠ್ಮಂಡುವಿನಲ್ಲಿ ಮಹಿಳೆಯ ಜತೆ ಪಬ್​ನಲ್ಲಿ ಇದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ನೇಪಾಳದಲ್ಲಿರುವ ಸ್ನೇಹಿತೆ ಸುಮ್ನಿಮಾ ಉದಾಸ್​ ಅವರ ಪುತ್ರಿಯ ಮದುವೆಗೆಂದು ರಾಹುಲ್​ ಗಾಂಧಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಇರುವ ಮಹಿಳೆ ಯಾರು ಎಂಬ ಬಗ್ಗೆ ಗುಮಾನಿ ಇದ್ದರೂ, ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಹೀಗೆ ನೈಟ್​ಕ್ಲಬ್​ನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದು ಮಾತ್ರ ಭಾರಿ ಕೋಲಾಹಲ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net