

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ದೆಹಲಿಯಲ್ಲಿ ಹಲ್ಲಾ ಬೋಲ್ (ದನಿ ಎತ್ತಿ) ರ್‍ಯಾಲಿ ನಡೆಸುತ್ತಿದೆ. ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ರ್‍ಯಾಲಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಚಾಲನೆ ಸಿಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅಧಿಕಾರಕ್ಕೆ ಬಂದ ನಂತರ ದ್ವೇಷ ಮತ್ತು ವಿಭಜನೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 'ಮೋದಿ ಸರ್ಕಾರಕ್ಕೆ ಇಬ್ಬರು ಸಹೋದರರು ಇದ್ದು ಅವರೆಂದರೆ ನಿರುದ್ಯೋಗ ಮತ್ತು ಹಣದುಬ್ಬರ' ಎಂದು ಹೇಳಿದರು. ದೇಶದಲ್ಲಿ ಹಣದುಬ್ಬರದ ಭಯ, ನಿರುದ್ಯೋಗ ಹೆಚ್ಚುತ್ತಿದೆ ಮತ್ತು ಇದರಿಂದಾಗಿ ದ್ವೇಷ ಹೆಚ್ಚುತ್ತಿದೆ; ದ್ವೇಷ ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕೃಷಿ ಕಾನೂನಿನ ಬಗ್ಗೆಯೂ ಮಾತನಾಡಿದ ಅವರು, ಇದನ್ನು ಜಾರಿಗೆ ತಂದಿರುವುದು ರೈತರಿಗಾಗಿ ಅಲ್ಲ, ಬದಲಿಗೆ ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ಎಂದು ರಾಹುಲ್ ಕಿಡಿ ಕಾರಿದರು.
2024ರ ಚುನಾವಣೆಗೂ ಇದಕಲ್ಕೂ ಯಾವುದೇ ಸಂಬಂಧವಿಲ್ಲ. ದೇಶದ ಜನರು ಹಣದುಬ್ಬರ ಮತ್ತು ನಿರುದ್ಯೋಗದಿಂದ ತೊಂದರೆಗೀಡಾಗಿದ್ದು, ಸಂವೇದನೆ ಕಳೆದುಕೊಂಡಿರುವ ಕೇಂದ್ರ ಸರ್ಕಾರಕ್ಕೆ ಇದು ಸೂಕ್ತ ಸಂದೇಶ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಹಣದುಬ್ಬರ ಮತ್ತು ಬೆಲೆಏರಿಕೆ ವಿರುದ್ಧ ಪಕ್ಷವು ನಿರಂತರ ಹೋರಾಟ ನಡೆಸಲಿದೆ. ಸೆಪ್ಟೆಂಬರ್ 7ರಿಂದ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರಾ ಆರಂಭಿಸಲಿದ್ದು, ಪಕ್ಷದ ಹಲವು ಸಂಸದರು ಮತ್ತು ಸ್ಥಳೀಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಯು ಸಂಚರಿಸಲಿದೆ ಎಂದರು.
ಈಗಾಗಲೇ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್‍ಯಾಲಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಸಾವಿರಾಗು ಕಾಂಗ್ರೆಸ್ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ. ವಿವಿಧ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಕುರಿತು ದೆಹಲಿ ಪೊಲೀಸರು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಪ್ಯಾರಾ ಮಿಲಿಟರಿ ದಳಗಳನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ಗಳನ್ನು ಅಳವಡಿಸಲಾಗಿದೆ. (ಏಜೆನ್ಸೀಸ್)