ಭಾರತದ ಮೇಲೆ ದಾಳಿಗೆ ಸಂಚು: ಪಾಕ್​ ವಿರುದ್ಧ ಸ್ಫೋಟಕ ಮಾಹಿತಿ ಬಹಿರಂಗಗೊಳಿದ್ದ ಉಗ್ರನ ಸಾವು

terror
Published on

ಶ್ರೀನಗರ: ಭಾರತದ ಗಡಿಯೊಳಗೆ ನುಸುಳುವ ಸಂದರ್ಭದಲ್ಲಿ ಎರಡು ವಾರಗಳ ಹಿಂದೆ ಬಂಧಿತನಾಗಿದ್ದ ಪಾಕಿಸ್ತಾನದ ಉಗ್ರ ತಬ್ರಕ್ ಹುಸೇನ್ ರಾಜೌರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಸೇನಾ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಗುಂಡೇಟಿನಿಂದ ಗಾಯಗೊಂಡಿದ್ದ ಉಗ್ರನ ಜೀವ ಉಳಿಸಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಸ್ವತಃ ಸೇನೆಯ ಯೋಧರು ಆತನಿಗೆ ರಕ್ತ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಬ್ಜ್‌ಕೋಟ್ ಗ್ರಾಮದ ನಿವಾಸಿಯಾದ ಹುಸೇನ್, ಭಾರತೀಯ ಸೇನಾ ನೆಲೆಯ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಆತ ಕಳೆದ ತಿಂಗಳು ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವೇಳೆ ಗುಂಡಿನ ದಾಳಿಗೆ ಗಾಯಗೊಂಡಿದ್ದ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾಕಿಸ್ತಾನಿ ಸೇನೆ ಇಲ್ಲಿ ಆತ್ಮಾಹುತಿ ಕಾರ್ಯಾಚರಣೆ ನಡೆಸಲು 30,000 ರೂ. ನೀಡಿದ್ದಾಗಿಯೂ, ತನ್ನೊಂದಿಗೆ 4-5 ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದ್ದಾಗಿಯೂ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಭಾರತದ ಮುಂಚೂಣಿ ನೆಲೆ ಬಳಿ ಎರಡು ಮೂರು ಬಾರಿ ಪರಿಶೀಲನೆ ನಡೆಸಿ, ದಾಳಿಗಾಗಿ ಸೂಕ್ತ ಅವಕಾಶಕ್ಕೆ ಕಾಯುತ್ತಿದ್ದುದ್ದನ್ನು ಬಾಯ್ಬಿಟ್ಟಿದ್ದ.

ಆಗಸ್ಟ್ 21ರಂದು ಕರ್ನಲ್ ಯೂನುಸ್ ಚೌಧರಿ, ಹುಸೇನ್ ಮತ್ತು ಇತರರಿಗೆ ದಾಳಿಯ ಸೂಚನೆ ನೀಡಿದ್ದ. ಅದಕ್ಕಾಗಿ ಒಳನುಸುಳುವ ಪ್ರಯತ್ನ ಮಾಡುತ್ತಿದ್ದಾಗ ಉಗ್ರರ ಚಲನವಲನ ಸೇನೆಯ ಕಣ್ಣಿಗೆ ಬಿದ್ದಿತ್ತು. ಹುಸೇನ್‌ನ ಜತೆಗಿದ್ದ ಇಬ್ಬರು ಉಗ್ರರು ಪರಾರಿಯಾಗಿದ್ದರು.

ಈತ 2016ರಲ್ಲಿ ತನ್ನ ಸಹೋದರ ಹರೂನ್ ಅಲಿ ಜತೆ ಅದೇ ವಲಯದಲ್ಲಿ ಬಂಧಿತನಾಗಿದ್ದ. ಆದರೆ ನವೆಂಬರ್‌ನಲ್ಲಿ ಆತನನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net