

ಚೆನ್ನೈ: ಕಾಂಗ್ರೆಸ್ನಿಂದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಕುತೂಹಲದ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ಸಿಕ್ಕಾಪಟ್ಟೆ ಖುಷಿಯಾಗಿರುವ ಘಟನೆ ಇದಾಗಿದೆ. ಇದಕ್ಕೆ ಕಾರಣ ಮದುವೆಯ ವಿಷಯ!
ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಬ್ಬರು ರಾಹುಲ್ ಗಾಂಧಿ ಬಳಿ ಮದುವೆ ಬಗ್ಗೆ ಮಾತೆತ್ತಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್ ತುಂಬಾ ಖುಷಿಯಿಂದ ರೋಮಾಂಚನಗೊಂಡಿದ್ದಾರೆ. ಕೂಡಲೇ ಆ ಮಹಿಳೆ ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿ ಹೇಳಿದಾಗ ರಾಹುಲ್ ನಾಚಿ ನೀರಾದರು.
ಇದರ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. 'ಒಬ್ಬ ಮಹಿಳೆ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ ರಾಹುಲ್ ಸಂತೋಷಗೊಂಡವರಂತೆ ಕಾಣುತ್ತಿದ್ದರು, ಇದು ಭಾರತ್ ಜೋಡೋ ಯಾತ್ರೆಯ 3 ನೇ ದಿನದ ಉಲ್ಲಾಸದ ಕ್ಷಣ' ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
'ರಾಹುಲ್ ಗಾಂಧಿಯವರು ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆಂದು ನನಗೆ ತಿಳಿದಿದೆ, ಈಗ ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಿದ್ದಾರೆ ಎಂಬುದೂ ತಿಳಿಯಿತು. ಮದುವೆ ಪ್ರಸ್ತಾಪ ಎತ್ತುತ್ತಿದ್ದಂತೆಯೇ ರಾಹುಲ್ ಗಾಂಧಿ ಉಲ್ಲಾಸಭರಿತರಾದರು. ಖುಷಿ ಖುಷಿಯಿಂದ ಆ ಮಹಿಳೆಯ ಜತೆ ಚರ್ಚೆ ನಡೆಸಿದರು' ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ ಐದು ತಿಂಗಳ ಪಾದಯಾತ್ರೆಯನ್ನು ಸ್ವತಃ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡಿನಿಂದ ಆರಂಭಿಸಲಿದ್ದಾರೆ. ಎರಡು ಹಂತಗಳಲ್ಲಿ ಪ್ರಯಾಣ ನಡೆಯಲಿದೆ. (ಏಜೆನ್ಸೀಸ್)