

ನವದೆಹಲಿ: ಕರೊನಾ ವೈರಸ್ ಪೀಡಿತರಾಗಿ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಇಂದು ಮೃತಪಟ್ಟಿದ್ದಾರೆ.
ಲಾಲೂ ಪ್ರಸಾದ್ ಜತೆಗಿನ ಸುದೀರ್ಘ ಸ್ನೇಹ ಕಡಿದುಕೊಂಡು ಆರ್ಜೆಡಿ ಪಕ್ಷದಿಂದ ಇವರು ಇದೇ ಗುರುವಾರ ಹೊರಕ್ಕೆ ಬಂದಿದ್ದರು. ಮೂರು ದಶಕಗಳ ತಮ್ಮ ಸ್ನೇಹದಿಂದ ಹೊರಬಂದು ಆರ್ಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಜೂನ್ ತಿಂಗಳಿನಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವಾರ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಆದರೆ ಇವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.
ಕಳೆದ ಶುಕ್ರವಾರ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಮೂಲಕ ಅವರು ಜೆಡಿಯು ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿ ಹಬ್ಬಿತ್ತು.
1946 ಜೂನ್ 6ರಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಜನಿಸಿದ್ದ ರಘುವಂಶ್, ಗಣಿತದಲ್ಲಿ ಪಿಎಚ್ಡಿ ಮಾಡಿದ್ದರು, 1973ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಇವರು, 1977ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದೂ ಅಲ್ಲದೇ ಸಚಿವರೂ ಆಗಿದ್ದರು. ನಂತರ ಆರ್ಜೆಡಿ ಸೇರಿದ್ದರು.
ರಘುವಂಶ್ ಪ್ರಸಾದ್ ಸಿಂಗ್ ಅವರು ಮೂರು ಬಾರಿ ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಮೊದಲ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿದ್ದ ಮನ್ರೇಗಾ (MNREGA) ಯೋಜನೆಯ ರೂವಾರಿ ಕೂಡ ಇವರೇ. ಸಂಸದರಾಗಿ ಕೂಡ ಆರು ಅವಧಿಯಲ್ಲಿ ಅವರು ಅನೇಕ ಸಂಸದೀಯ ಮಂಡಳಿಗಳ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು.
ಲಾಲೂ ಪ್ರಸಾದ್ ಮತ್ತು ರಘುವಂಶ್ ಸ್ನೇಹ ಸುದೀರ್ಘವಾಗಿದ್ದು, ಎಂಥ ಪರಿಸ್ಥಿತಿಯಲ್ಲಿಯೂ ಮುರಿದು ಹೋಗಿರಲಿಲ್ಲ. ಆದರೆ, ಇತ್ತೀಚೆಗೆ ರಾಮ್ಸಿಂಗ್ ಎಂಬಾತ ಆರ್ಜೆಡಿ ಸೇರಿದ್ದು, ರಾಮ್ಸಿಂಗ್ ಅವರು ರಘುವಂಶ್ ಪ್ರಸಾದ್ ಅವರ ಬದ್ಧವೈರಿ ಎನಿಸಿಕೊಂಡಿದ್ದರಿಂದ ಬೇಸತ್ತ ರಘುವಂಶ್ ಅವರು ಆರ್ಜೆಡಿಯನ್ನೇ ಬಿಡಲು ನಿರ್ಧರಿಸಿದ್ದ ಎನ್ನಲಾಗುತ್ತದೆ.