ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ಪಕ್ಷದ ಐವರು ಅಧ್ಯಕ್ಷರ ರಾಜೀನಾಮೆ

punjab
Published on

ಪಂಜಾಬ್:  ಪಂಜಾಬ್​, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರದ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಕಾಂಗ್ರೆಸ್​ಗೆ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸೂಕ್ತ ನಾಯಕತ್ವದ ಕೊರತೆಯಿಂದ ಕಾಂಗ್ರೆಸ್​ ಇಂಥ ಸೋಲು ಕಂಡಿರುವುದಾಗಿ ವಿಶ್ಲೇಷಿಸಲಾಗುತ್ತಿದ್ದರೂ, ಈ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆ ನಡೆಯುತ್ತಲೇ ಇದೆ.

ಈ ನಡುವೆಯೇ, ಈ ಐದು ರಾಜ್ಯಗಳ ಕಾಂಗ್ರೆಸ್‌ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ನೀಡಿದ್ದರು. ಅದರಂತೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಿದ್ದಾರೆ.

ಐದು ರಾಜ್ಯಗಳಲ್ಲಿ ಪಕ್ಷದ ಮುಖ್ಯಸ್ಥರನ್ನು ಸೋನಿಯಾಗಾಂಧಿ ವಜಾಗೊಳಿಸಿದ ಒಂದು ದಿನದ ನಂತರ, ಪಕ್ಷದ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋನಿಯಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸಿಧು, "ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ ನಾನು ನನ್ನ ರಾಜೀನಾಮೆಯನ್ನು ಕಳುಹಿಸಿದ್ದೇನೆ" ಎಂದಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಕೂಡ ಅವರು ಮಾಹಿತಿ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬದಲಾವಣೆಯನ್ನು ತರಲು ಅತ್ಯುತ್ತಮ ನಿರ್ಧಾರವನ್ನು ಮಾಡಿದ್ದಕ್ಕಾಗಿ ಸಿಧು ಚುನಾವಣೆ ಫಲಿತಾಂಶದ ಬಳಿಕ ಅಭಿನಂದನೆ ಸಲ್ಲಿಸಿದ್ದರು.

ಪಂಜಾಬ್‌ನ ಒಟ್ಟು 117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ಬರೀ 18 ಸ್ಥಾನಗಳನ್ನಷ್ಟೇ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net