

ನವದೆಹಲಿ: ಹದಿನಾರನೇ ರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಿಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು ಮತ ಚಲಾಯಿಸಿದ್ದಾರೆ.
ಸಂಸದರು ಮತ್ತು ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ ಅಂದಾಜು 4,800 ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, 11.20ರ ವರೆಗೆ ಒಟ್ಟು 136 ಶಾಸಕರಿಂದ ಮತದಾನವಾಗಿದೆ.
ಮುಂದಿನ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತ ಎನಿಸಿದೆ. ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿ(ಎಸ್), ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಈಗ ಜೆಎಂಎಂ ಬೆಂಬಲದೊಂದಿಗೆ ದ್ರೌಪದಿ ಮುರ್ಮು ಅವರು 60ಕ್ಕೂ ಹೆಚ್ಚು ಮತಗಳೊಂದಿಗೆ ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವಿದೆ. ಒಂದು ವೇಳೆ ಮುರ್ಮು ಅವರು ರಾಷ್ಟ್ರಪತಿಯಾಗಿ ಚುನಾಯಿತರಾದರೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಶಾಸಕರು ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತ್ತು ಸಂಸದರು ತಮ್ಮ ರಾಜ್ಯಗಳ ಮತಕೇಂದ್ರ ಅಥವಾ ದೆಹಲಿಯ ಸಂಸತ್ ಭವನದಲ್ಲಿ ಮತದಾನ ಮಾಡಬಹುದಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಆಗಿರುವ ಕಾರಣ ಪ್ರತಿ ಸಂಸದರ ಮತಮೌಲ್ಯ 708ರಿಂದ 700ಕ್ಕೆ ಇಳಿದಿದೆ. ಶಾಸಕರ ಮತಮೌಲ್ಯವು ಆಯಾ ರಾಜ್ಯಗಳ ಜನಸಂಖ್ಯೆ ಅನುಗುಣವಾಗಿ ಇರಲಿದೆ. ಉದಾಹರಣೆಗೆ ಉತ್ತರಪ್ರದೇಶದ ಶಾಸಕರ ಮತಮೌಲ್ಯ 208 (ಗರಿಷ್ಠ) ಇದ್ದರೆ, ಸಿಕ್ಕಿಂನಲ್ಲಿ ಇದು ಏಳು (ಕನಿಷ್ಠ) ಆಗಿದೆ. ಮತಪತ್ರದಲ್ಲಿ ಪ್ರಾಶಸ್ಱವಾರು ಮತವನ್ನು ಗುರುತು ಮಾಡುವುದರ ಮೂಲಕ ಮತದಾರರು ತಮ್ಮ ಆಯ್ಕೆಯನ್ನು ಸೂಚಿಸಬಹುದು.
ಇಂದು ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಜುಲೈ 21ರಂದು ನಡೆಯಲಿದ್ದು, ಹೊಸ ರಾಷ್ಟ್ರಪತಿಗಳು 25ಕ್ಕೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮತ ಎಣಿಕೆ ಜುಲೈ 21ರಂದು ನಡೆಯಲಿದ್ದು, ಹೊಸ ರಾಷ್ಟ್ರಪತಿಗಳು 25ಕ್ಕೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.