ಸಕಲ ಸೌಲಭ್ಯ ಹೊಂದಿರೋ, ಪಕ್ಕದಲ್ಲೇ ಬಾರ್​ ಇರುವ ಸೂಪರ್​ ಕೊಠಡಿಗಳು ಫ್ರೀ ಸಿಗುತ್ತೆ, ಸಂಪರ್ಕಿಸಿ... ಪೊಲೀಸರ ಟ್ವೀಟ್​

police
Published on

ನವದೆಹಲಿ: ಗಾಳಿ, ಬೆಳಕು ಚೆನ್ನಾಗಿವೆ. ಭದ್ರತೆ ಸೂಪರ್​, ಸೆಕ್ಯುರಿಟಿಯಂತೂ ಹೇಳೋದೇ ಬಿಡ. ಉಚಿತವಾಗಿ ಹಾಸಿಗೆಯೂ ಸಿಗುತ್ತದೆ, ಸಿಸಿಟಿವಿ ಇದೆ, ಮಾತ್ರವಲ್ಲದೇ ಟಿ.ವಿ. ಸಂಗೀತ ಕೊಠಡಿ, ಕ್ರೀಡೆ ಎಲ್ಲವೂ ಇದೆ. ಶೇರಿಂಗ್​ ಕೂಡ ಮಾಡಿಕೊಳ್ಳಬಹುದು, ಕೆಲವೊಮ್ಮೆ ಒಂಟಿಯಾಗಿಯೂ ಇರಬಹುದು. ನೀವಿರುವಲ್ಲಿಂದಲೇ ಪಿಕ್​ಅಪ್​ ಸೌಲಭ್ಯವೂ ಇದೆ. ಅಷ್ಟೇ ಅಲ್ಲ... ಪಕ್ಕದಲ್ಲಿ ಬಾರ್​ ಕೂಡ ಇದೆ... ಅಚ್ಚರಿ ಎಂದರೆ ಎಲ್ಲವೂ ಫ್ರೀ ಫ್ರೀ... ನಿಮಗೆ ಬೇಕಾ? ಹಾಗಿದ್ದರೆ ಸಂಪರ್ಕಿಸಿ...

ಹೀಗೆಂದು ದೆಹಲಿಯ ಪೊಲೀಸ್​ ಇಲಾಖೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಇದೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಕೋಣೆ ಫ್ರೀಯಾಗಿ ಕೊಡುತ್ತಾರೆಂದರೆ ಯಾರಿಗೆ ತಾನೆ ಬೇಡ? ಅದೂ ಇಷ್ಟೆಲ್ಲಾ ಸೌಲಭ್ಯ ಇರುವಾಗ ಎಂದೆಲ್ಲಾ ಅಂದುಕೊಳ್ಳುವವರೇ ಹೆಚ್ಚು. ಅಸಲಿಗೆ ಈ ಟ್ವೀಟ್​ನಲ್ಲಿ ಪೊಲೀಸರು ಹೇಳಿರುವುದು ಇವೆಲ್ಲಾ ಸೌಲಭ್ಯ ಇರುವ ಜೈಲಿನ ಕೊಠಡಿ ಬಗ್ಗೆ!

ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಜನರಿಗೆ ಹಾಸ್ಯಮಯವಾದ ರೀತಿಯಲ್ಲಿ ಎಚ್ಚರಿಕೆಯನ್ನು ನೀಡಲು ಈ ರೀತಿ ಟ್ವೀಟ್​ ಮಾಡಲಾಗಿದೆ. ಕ್ರಿಮಿನಲ್​ ಪ್ರಕರಣಗಳಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಟ್ವೀಟ್​ ಮಾಡಿದ್ದೇವೆ. ಹೀಗೇನಾದರೂ ತಪ್ಪು ದಾರಿಗೆ ಹೋದರೆ ಇರುವ ಜಾಗದಿಂದಲೇ ಸರ್ಕಾರಿ ವಾಹನದಲ್ಲಿ ಉಚಿತವಾಗಿ ಪಿಕಪ್​ ಮಾಡಿಕೊಂಡು ಹೋಗಲಾಗುವುದು ಎಂದು ಎಚ್ಚರಿಸಿದ್ದೇವೆ ಎಂದಿದ್ದಾರೆ ಪೊಲೀಸರು.

ಅಪರಾಧ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸಲು ಇಂಥ ತಮಾಷೆಭರಿತ ಟ್ವೀಟ್​ ಶೇರ್​ ಮಾಡುವುದು ಕೆಲವು ರಾಜ್ಯಗಳಲ್ಲಿ ಕಾಣಬಹುದು. ನಾವು ಕೂಡ ಅದನ್ನೇ ಮಾಡುತ್ತಿದ್ದೇವೆ. ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಜೈಲಿನಲ್ಲಿ ಉಚಿತವಾಗಿ ಎಲ್ಲಾ ನೀಡುತ್ತೇವೆ ಎಂಬ ಎಚ್ಚರಿಕೆಯನ್ನು ಈ ಮೂಲಕ ಹೇಳುತ್ತಿದ್ದೇವೆ ಎಂದಿದ್ದಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net