ಪಿಓಕೆಯಲ್ಲಿ ಇಮ್ರಾನ್​ ಖಾನ್​ ಪಕ್ಷಕ್ಕೆ ಭರ್ಜರಿ ಗೆಲುವು: ಕಾಶ್ಮೀರವನ್ನು ಪಾಕ್​ಗೆ ಸೇರಿಸಿಕೊಳ್ಳಲು ಪ್ಲ್ಯಾನ್​

imrankhan
Published on

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಭರ್ಜರಿ ಜಯಭೇರಿ ಭಾರಿಸಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.

ಇದೇ ವೇಳೆ ವಿವಾದಾತ್ಮಕ ಹೇಳಿಕೆ ನೀಡಿರುವ ಇಮ್ರಾನ್​ ಖಾನ್​, ಕಾಶ್ಮೀರದ ಜನತೆಗೆ, ತಮ್ಮ ನೆಲವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಅಥವಾ ಸ್ವತಂತ್ರ ರಾಷ್ಟ್ರವಾಗಿ ರೂಪಿಸುವ ಎರಡು ಆಯ್ಕೆಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿದ್ದಾರೆ.

'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಪಕ್ಷವು 23 ಸ್ಥಾನಗಳನ್ನು ಗೆದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 6 ಸ್ಥಾನಗಳಲ್ಲಿ ತನ್ನದಾಗಿಸಿಕೊಂಡಿದೆ. ಇದಲ್ಲದೆ ಮುಸ್ಲಿಂ ಕಾನ್ಫರೆನ್ಸ್ ‌(ಎಂಸಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಪಾರ್ಟಿ(ಜೆಕೆಪಿಪಿ) ತಲಾ ಒಂದು ಸ್ಥಾನವನ್ನು ಗೆದ್ದಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಪಿಪಿಪಿಯ ಉಪಾಧ್ಯಕ್ಷೆ ಶೆರಿ ರೆಹಮಾನ್‌ ಮಾತನಾಡಿ, ಈ ಚುನಾವಣೆಯಲ್ಲಿ ವಂಚನೆ ನಡೆದಿದೆ. ಇದಕ್ಕೆ ಸಾಕ್ಷ್ಯಾಧಾರಗಳು ಇವೆ ಎಂದಿದ್ದಾರೆ. ಮತದಾನದ ವೇಳೆ ಪಿಟಿಐ ಕಾರ್ಯಕರ್ತರು ಪಿಪಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದವು ಎಂದು ಹೇಳಿದ್ದಾರೆ.

ಇದೇ ವೇಳೆ ಇಮ್ರಾನ್​ ಖಾನ್​ ಹೇಳಿಕೆಗೆ ವಿರೋಧಿಸಿರುವ ಪಿಎಂಎಲ್‌-ಎನ್‌ ಪಕ್ಷದ ಅಧ್ಯಕ್ಷ ಷರೀಫ್, ಎರಡು ರಾಷ್ಟ್ರಗಳಲ್ಲಿ ಯಾರನ್ನು ಸೇರಬೇಕೆಂಬುದು ಕಾಶ್ಮೀರಿಗರೇ ನಿರ್ಧರಿಸಲಿ ಎಂದು ಈಗಾಗಲೇ ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯೇ ನಿವಾರಿಸಬೇಕೆಂದು ಪಾಕಿಸ್ತಾನ ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಹಾಗಾಗಿ, ಖಾನ್‌ ಹೇಳಿಕೆ ಇತಿಹಾಸ ನಿರ್ಲಕ್ಷಿಸುವ ಹಾಗೂ ಸಂವಿಧಾನ ವಿರೋಧಿಸುವಂಥದ್ದು ಎಂದಿದ್ದಾರೆ.

ಇಮ್ರಾನ್​ ಖಾನ್​ ಪಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಪಿಓಕೆಯ ಸ್ವಯಂ ಘೋಷಿತ ಪ್ರಧಾನಿ ರಾಜಾ ಫಾರೂಖ್​ ಹೈದರ್​, ಕಾಶ್ಮೀರ ಜನತೆಯನ್ನು ಹಿಗ್ಗಾಮುಗ್ಗ ಬೈದಿದ್ದು, ಇಲ್ಲಿಯ ಮತದಾರರದ್ದು ಜೀತದಾಳುಗಳ ಮನಸ್ಥಿತಿ. ಅದಕ್ಕಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net