

ಅಯೋಧ್ಯೆ: ಇವತ್ತು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮದಿನ. ದೇಶ ಕಂಡ ಅಪರೂಪದ ಈ ಗಾಯಕಿಯ 93ನೇ ಹುಟ್ಟುಹಬ್ಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಪೂರ್ವ ಗೌರವವನ್ನು ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಚೌಕ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ 40 ಅಡಿ ಉದ್ದದ ವೀಣಾ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ಸರಯೂ ನದಿಯ ದಡದಲ್ಲಿರುವ ಹೊಸ ಘಾಟ್ ಪ್ರದೇಶವನ್ನು ಲತಾ ಮಂಗೇಶ್ಕರ್ ಚೌರಾಹಾ ಎಂದು ಕರೆಯಲಾಗಿದ್ದು, ಇದನ್ನು 7.9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೃತ್ತದ ಮಧ್ಯೆ 14 ಟನ್ ತೂಕ, 40 ಅಡಿ ಉದ್ದ ಮತ್ತು 12 ಮೀಟರ್ ಎತ್ತರವಿರುವ ಭಾರತೀಯ ಸಂಗೀತ ವಾದ್ಯವಾದ ವೀಣೆಯನ್ನು ಸ್ಥಾಪಿಸಿರುವುದು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.
ವರ್ಚುವಲ್ ಆಗಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ಲತಾ ದೀದಿಯನ್ನು ಅವರ ಹುಟ್ಟುಹಬ್ಬದಂದು ನೆನಪಿಸುಕೊಳ್ಳುತ್ತಿದ್ದೇನೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಸದಾ ಸ್ಮರಣೀಯ. ಅಯೋಧ್ಯೆಯ ಈ ವೃತ್ತ ಅವರ ಹೆಸರಿನಿಂದ ಗುರುತಿಸಲ್ಪಡುತ್ತದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಇದು ಭಾರತದ ಶ್ರೇಷ್ಠ ಗಾಯಕಿಗೆ ನೀಡುವ ಸಮರ್ಪಕ ಗೌರವ ಎಂದು ನಾನು ಭಾವಿಸುತ್ತೇನೆ.’’ ಎಂದು ತಿಳಿಸಿದ್ದಾರೆ.
'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಪೂರ್ಣಗೊಂಡಾಗ, ನನಗೆ ಲತಾ ದೀದಿಯಿಂದ ಕರೆ ಬಂದಿತು. ಅವರು ತುಂಬಾ ಸಂತೋಷವಾಗಿದ್ದರು, ಉತ್ಸುಕರಾಗಿದ್ದರು. ರಾಮ ಮಂದಿರದ ನಿರ್ಮಾಣವು ಪ್ರಾರಂಭವಾಗುತ್ತದೆ ಎಂಬುದನ್ನು ನನಗೆ ನಂಬಲು ಆಗುತ್ತಿಲ್ಲ ಎಂದು ಅವರು ಹೇಳಿದ್ದು ನನಗೆ ನೆನಪಿದೆ' ಎಂದು ಪ್ರಧಾನಿ ಹೇಳಿದರು. 'ಸಹೋದರಿ ಲತಾ ತಮ್ಮ ಸ್ವರದಿಂದ ಜಗದ್ವಿಖ್ಯಾತಿ ಗಳಿಸಿದವರು. ತಮ್ಮ ಕಂಠದಿಂದ ಜನರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಲತಾ ಅವರ ಜತೆ ಕಳೆದ ಸಮಯ ನನಗೆ ಮತ್ತಷ್ಟು ಸ್ಫೂರ್ತಿ ನೀಡಿದೆ. ದೇಶಕ್ಕಾಗಿ ಕೆಲಸ ಮಾಡಲು ನನಗೆ ಸ್ಫೂರ್ತಿ ನೀಡಿದೆ' ಎಂದು ಸ್ಮರಿಸಿದರು.
'ಲತಾ ದೀದಿ ಅವರ ಹೆಸರಿನ ಈ ಚೌಕ್ ನಮ್ಮ ದೇಶದ ಕಲಾ ಪ್ರಪಂಚದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಸ್ಫೂರ್ತಿಯ ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ. ಭಾರತದ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು, ಆಧುನಿಕತೆಯತ್ತ ಸಾಗುವುದು, ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ ಎಂಬುದನ್ನು ಇದು ತೋರಿಸುತ್ತದೆ' ಎಂದು ಪ್ರಧಾನಿ ಮೋದಿ ಹೇಳಿದರು.
1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಕಳೆದ ಫೆ.6ಕ್ಕೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪರಿಚಯ್, ಕೋರಾ ಕಾಗಝ್, ಲೇಖಿನ್ ಚಲನಚಿತ್ರಗಳಲ್ಲಿನ ಹಿನ್ನಲೆ ಗಾಯನಕ್ಕಾಗಿ ಅವರಿಗೆ 3 ಬಾರಿ ರಾಷ್ಟ್ರಪ್ರಶಸ್ತಿ ಬಂದಿತ್ತು. 1989ರಲ್ಲಿ ಅವರು ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. (ಏಜನ್ಸೀಸ್)
ಪ್ರಧಾನಿ ಮೋದಿ ಭಾಷಣದ ವಿಡಿಯೋ ಇಲ್ಲಿದೆ: