

ಭುವನೇಶ್ವರ: ಇಲ್ಲಿನ ರಾಜಭವನದ ಬಳಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಬಂಕ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಎಂಟು ಮಂದಿ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಕಟಕ್ನ ಎಸ್ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಉಳಿದವರಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಯಾಪಿಟಲ್ ಆಸ್ಪತ್ರೆಯ ನಿರ್ದೇಶಕ ಎಲ್.ಡಿ. ಸಾಹು ತಿಳಿಸಿದ್ದಾರೆ.
ಇದರ ಭೀಕರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಮನೆಯಲ್ಲಿ ಇರುವವರಿಗೆ ಇಡೀ ಕಟ್ಟಡವೇ ಅಲ್ಲಾಡಿದಂತೆ ಭಾಸವಾಗಿದೆ. ಈ ಪೆಟ್ರೋಲ್ ಬಂಕ್ ಜನನಿಭಿಡ ಪ್ರದೇಶದಲ್ಲಿ ಇರುವ ಹಿನ್ನೆಲೆಯಲ್ಲಿ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದೆ.
ಮೂರು ಅಗ್ನಿಶಾಮಕ ದಳಗಳು ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.ಘಟನೆಗೆ ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿಯು ಪೆಟ್ರೋಲ್ ಮತ್ತು ಡೀಸೆಲ್ ಇರುವ ಇನ್ನೆರಡು ಟ್ಯಾಂಕ್ಗಳಿಗೆ ಹರಡದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎರಡು ಟ್ಯಾಂಕರ್ಗಳಿಂದ ಇಂಧನವನ್ನು ಹೊರಹಾಕಲು ತಕ್ಷಣ ಕ್ರಮ ಕೈಗೊಳ್ಳುವಂತೆ ಐಒಸಿಎಲ್ ಗೆ ಸೂಚಿಸಲಾಗಿದೆ ಎಂದಿದ್ದಾರೆ.
ಇದೇ ವೇಳೆ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.