ದುಬೈನಲ್ಲೂ ಭಾರತದವನ ಬಿಡದ ಪಾಕ್​ ಕಳ್ಳರು- ಹಲ್ಲೆ ಮಾಡಿ ದರೋಡೆ!

robbery
Published on

ದುಬೈ: ದುಬೈನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಪಾಕಿಸ್ತಾನದ ದರೋಡೆಕೋರರು ಹಲ್ಲೆ ನಡೆಸಿ ಇದ್ದದ್ದನ್ನೆಲ್ಲಾ ದೋಚಿರುವ ಘಟನೆ ವರದಿಯಾಗಿದೆ.

ಬುರ್ ದುಬೈ ಪ್ರದೇಶದ ವಾಸಿಸುತ್ತಿರುವ 33 ವರ್ಷದ ಭಾರತೀಯ ಯುವಕನ ಮನೆಗೆ ನುಗ್ಗಿರುವ ದರೋಡೆಕೋರರು, ಅವರ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣವನ್ನು ಸಹ ಕದ್ದಿದ್ದಾರೆ. ಮಾತ್ರವಲ್ಲದೇ ಯುವಕನ ಮೇಲೆ ತೀವ್ರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ.

ಈ ಕುರಿತು ಅಲ್ಲಿಯ ಕೋರ್ಟ್​ನಲ್ಲಿ ಯುವಕ ದೂರು ದಾಖಲು ಮಾಡಿದ್ದಾನೆ. ದರೋಡೆಕೋರರು ಮುಖವನ್ನು ಮುಚ್ಚಿಕೊಂಡು ಬಂದಿದ್ದರು. ನನ್ನ ಮುಖದ ಮೇಲೆ ಪ್ಲಾಸ್ಟಿಕ್ ಚೀಲ ಹಾಕಿ, ಬಾಯಿಗೆ ಟೇಪ್ ಹಚ್ಚಿ ಹಲ್ಲೆ ಮಾಡಿದ್ದಾರೆ. ನಾನು ವಿರೋಧ ವ್ಯಕ್ತಪಡಿಸಿದಾಗ ಲೋಹದ ಪಟ್ಟಿಯಿಂದ ತೀವ್ರವಾಗಿ ಹಲ್ಲೆ ಮಾಡಿದರು ಎಂದು ಯುವಕ ಹೇಳಿದ್ದಾನೆ.

ನಾನು ದಾಳಿಕೋರರ ಮುಖವಾಡವನ್ನು ಎಳೆದು ಒಬ್ಬನ ಮುಖವನ್ನು ನೋಡಿದ್ದೇನೆ. ಅವರನ್ನು ಗುರುತಿಸಬಲ್ಲೆ ಎಂದಿದ್ದಾನೆ. ಮುಖಕ್ಕೆ ಹಾಕಿದ್ದ ಪ್ಲಾಸ್ಟಿಕ್​ ಚೀಲ ಹಾಗೂ ಬಾಯಿಗೆ ಹಚ್ಚಿದ್ದ ಟೇಪ್​ ಕಿತ್ತೆಸೆಯುವಲ್ಲಿ ಯಶಸ್ವಿಯಾದ ನಾನು ದರೋಡೆಕೋರನನ್ನು ಹಿಂಬಾಲಿಸಿದೆ. ಆದರೆ ಆ ವೇಳೆಗಾಗಲೇ ನನ್ನ ಬಳಿ ಇದ್ದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಕ್ರೆಡಿಟ್​ ಕಾರ್ಡ್​ ಮತ್ತು ಹಣವನ್ನು ಕದ್ದೊಯ್ದರು ಎಂದಿದ್ದಾನೆ.

ತನಿಖೆ ವೇಳೆ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು, ದರೋಡೆಗೆ ಬಂದವರು ಪಾಕಿಸ್ತಾನದ ಮೂಲದವರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net