

ಪೇಶಾವರ : ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಮದರಸಾದ ಮೇಲೆ ಬಾಂಬ್ ದಾಳಿ ನಡೆದಿದೆ.
ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ ಕುರಿತು ಉಪನ್ಯಾಸ ನೀಡುತ್ತಿರುವಾಗ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಚೀಲದಲ್ಲಿ ಬಾಂಬ್ ಇಟ್ಟು ಹೋದ ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಏಳು ಮಕ್ಕಳು ಬಲಿಯಾಗಿದ್ದಾರೆ. ಅನೇಕ ಮಕ್ಕಳೂ ಸೇರಿ 70ಕ್ಕೂ ಅಧಿಕ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದೆಂದು ವೈದ್ಯರು ಹೇಳಿದ್ದಾರೆ.
ಪೇಶಾವರ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪ್ರಾಂತೀಯ ರಾಜಧಾನಿ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಂತ್ಯದಲ್ಲಿ ಉಗ್ರಗಾಮಿಗಳ ಕುಕೃತ್ಯ ಹೆಚ್ಚಾಗಿ ನಡೆಯುತ್ತಿದೆ. ಈ ಹಿಂದೆ ಕೂಡ ಮಸೀದಿಗಳು ಅಥವಾ ಸೆಮಿನರಿಗಳನ್ನು ಟಾರ್ಗೆಟ್ ಮಾಡಿಕೊಂಡು ಹಲವಾರು ಮಂದಿಯನ್ನು ಕೊಲ್ಲಲಾಗಿದೆ ಎಂದು ಮೂಲಗಳು ಹೇಳಿವೆ.
ನೈಋತ್ಯ ನಗರವಾದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟದಿಂದ ಎರಡು ಜನರು ಮೃತಪಟ್ಟ ಎರಡು ದಿನಗಳ ನಂತರ ಇದೀಗ ಇಂಥದ್ದೊಂದು ದಾಳಿ ನಡೆಸಲಾಗಿದೆ.