

ಚಂಡೀಗಢ: ಪಂಜಾಬ್ನ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಪಾಕಿಸ್ತಾನದ ಜತೆಗಿರುವ ಸಂಬಂಧದ ಕುರಿತಂತೆ ಇದಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಅವರ ಒಡನಾಟವನ್ನು ಸಾಬೀತು ಮಾಡುವ ಹಲವಾರು ಘಟನೆಗಳೂ ನಡೆದಿವೆ. ಇವುಗಳ ನಡುವೆಯೇ ಇದೀಗ ಇನ್ನೊಂದು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಪಂಜಾಬ್ ಸಚಿವ ಸಂಪುಟದಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ಸಚಿವರನ್ನಾಗಿ ಮಾಡುವಂತೆ ಪಾಕಿಸ್ತಾನದಿಂದ ಮೆಸೇಜ್ ಬಂದಿತ್ತು ಎಂಬ ಮಾಹಿತಿಯನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಹಿರಂಗಪಡಿಸಿದ್ದಾರೆ. ಇಮ್ರಾನ್ ಖಾನ್ ಮತ್ತು ಸಿಧು ಅವರ ಸ್ನೇಹಿತನೊಬ್ಬ ಈ ಸಂದೇಶವನ್ನು ಕಳುಹಿಸಿದ್ದ ಎಂದು ಹಿಂದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಈ ಲಾಬಿಯ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೂ ಮಾಹಿತಿ ನೀಡಿದ್ದೆ. ಸೋನಿಯಾ ಅವರು ಯಾವ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ಪ್ರಿಯಾಂಕಾ ಮಾತ್ರ ‘ಇಂತಹ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಸಿಧು ಒಬ್ಬ ಮೂರ್ಖ’ ಎಂದು ಉತ್ತರಿಸಿದ್ದರು. ಆದರೆ ಅವರು, ಸಿಧುರನ್ನ ಮಂತ್ರಿ ಮಾಡಿ ಮತ್ತು ಅವರು ಎಂದಾದರೂ ಕಿರಿಕ್ ಮಾಡಿದರೆ ಮುಲಾಜಿಲ್ಲದೆ ಸಂಪುಟದಿಂದ ಹೊರಹಾಕಿ ಎಂದು ಹೇಳಿದ್ದರು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
2017 ರಲ್ಲಿ ಸಿಧು ಕಾಂಗ್ರೆಸ್ ಸೇರಿದಾಗಲೇ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ನಾನು ಅಂದುಕೊಂಡಿದ್ದೆ ಎಂದೂ ಅಮರೀಂದರ್ ಹೇಳಿದ್ದಾರೆ. ಅಂದಹಾಗೆ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಸಿಎಂ ಆಗಿದ್ದರು. ಅವರು ಕಾಂಗ್ರೆಸ್ ತೊರೆದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸಲಿದ್ದಾರೆ ಇವರು.
ಹಿಂದೊಮ್ಮೆ ಸಿಧು ಅವರಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ಸ್ನೇಹದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಾಗ, ’ನಾನು 20 ವರ್ಷ ಇಮ್ರಾನ್ ಭಾಯಿ ಜತೆ ಒಟ್ಟಿಗೆ ಕ್ರಿಕೆಟ್ ಆಡಿದ್ದೇನೆ, ಅವರ ವಿರುದ್ಧ ಬೆನ್ನು ತಿರುಗಿಸಿ ನಿಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.