ಇಂಡೋ-ಪಾಕ್​ ಸಮಸ್ಯೆ ಬಗೆಹರಿಸಲು ಟಿ.ವಿ. ಚರ್ಚೆಗೆ ಬನ್ನಿ... ಪಾಕ್​ ಪ್ರಧಾನಿಯಿಂದ ಮೋದಿಗೆ ವಿಚಿತ್ರ ಆಹ್ವಾನ!

modi
Published on

ಇಸ್ಲಾಮಾಬಾದ್‌: ಭಾರತ-ಪಾಕಿಸ್ತಾನದ ನಡುವಿನ ಭಿನ್ನಮತಗಳನ್ನು ಬಗೆಹರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ವಿಚಿತ್ರ ಮನವಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ. ಅದೇನೆಂದರೆ ಟಿವಿ ಚರ್ಚೆ ನಡೆಸಲು ಬಯಸುವುದಾಗಿ ಅವರು ಹೇಳಿದ್ದಾರೆ.

ರಷ್ಯಾಗೆ ಭೇಟಿ ನೀಡಿರುವ ಇಮ್ರಾನ್​ಖಾನ್​ ಸರ್ಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಇದೀಗ ವೈರಲ್​ ಆಗಿದೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಂಡರೆ ಅದು ನಮಗೇ ಒಳ್ಳೆಯದು. ಹೀಗಾಗಿ ನಾನು ಮೋದಿ ಅವರ ಜೊತೆ ಟಿ.ವಿ ಸಂವಾದ ನಡೆಸಲು ಇಚ್ಚಿಸುತ್ತೇನೆ ಎಂದರು.

ಭಾರತದ ಮೇಲೆ ಅಘೋಷಿತ ಯುದ್ಧ ನಡೆಸುವ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸುವವರೆಗೂ ಆ ದೇಶದ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಗಲೀ ವ್ಯವಹಾರವಾಗಲೀ ಇಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟನಿಲುವು ತಾಳಿದೆ. ಆದರೆ, ಭಾರತ ಮಾತುಕತೆಗೆ ಬರಬೇಕು ಎಂದು ಪಾಕಿಸ್ತಾನ ಬೇರೆ ಬೇರೆ ರೀತಿಯಲ್ಲಿ ಆಹ್ವಾನಿಸುತ್ತಲೇ ಇದೆ. ಈಗ ಇಮ್ರಾನ್‌ ಖಾನ್‌ ನೇರವಾಗಿ ಪ್ರಧಾನಿಯನ್ನೇ ಟೀವಿ ಡಿಬೇಟ್‌ಗೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ.

ತಾವು ಅಧಿಕಾರಕ್ಕೆ ಬಂದ ಬಳಿಕ ಭಾರತದ ಜೊತೆ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಲು ಮನವಿ ಮಾಡಿದ್ದೆ. ಆದರೆ, ಭಾರತ ಸರ್ಕಾರ ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಲಿಲ್ಲ ಎಂದೂ ಅವರು ಆರೋಪಿಸಿದರು.

ರಷ್ಯಾ- ಉಕ್ರೇನ್​ ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ಮಾತುಕತೆಯೊಂದೇ ದಾರಿ. ಸೇನಾ ಸಂಘರ್ಷದ ಮೂಲಕ ಎಂದಿಗೂ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಮಿಲಿಟರಿ ಸಂಘರ್ಷಗಳಲ್ಲಿ ನಂಬಿಕೆಯಿಲ್ಲ. ರಾಜತಾಂತ್ರಿಕ ಮಾತುಕತೆ ಮೂಲಕ ರಾಷ್ಟ್ರಗಳ ಮಧ್ಯೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಸಂಘರ್ಷಗಳನ್ನು ನಂಬಿದ ರಾಷ್ಟ್ರಗಳು ಇತಿಹಾಸವನ್ನು ಅರಿತಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ಪಾಕಿಸ್ತಾನದ ಈ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net