

ಜಾವಾ (ಇಂಡೋನೇಷ್ಯಾ): ಕರೊನಾ ಸೋಂಕು ಶುರುವಾದ ದಿನದಿಂದಲೂ ಎಲ್ಲೆಡೆ ಕೇಳಿ ಬರುತ್ತಿರುವ ಕೆಲವು ಶಬ್ದಗಳ ಪೈಕಿ ಮಾಸ್ಕ್ ಒಂದು. ಇದು ಭಾರತ ಮಾತ್ರವಲ್ಲದೇ ಪ್ರಪಂಚಾದ್ಯಂತ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ.
ಮಾಸ್ಕ್ ಧರಿಸುವುದರಿಂದ ತಕ್ಕಮಟ್ಟಿಗಾದರೂ ಸೋಂಕಿನ ಪ್ರಮಾಣ ಕಡಿಮೆ ಮಾಡಬಹುದು ಎನ್ನುವ ಕಾರಣಕ್ಕೆ ಎಲ್ಲಾ ದೇಶಗಳಲ್ಲಿಯೂ ಇದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಬಳಕೆ ಎಷ್ಟು ಮಹತ್ವದ್ದು ಎಂದು ಪ್ರತಿದಿನವೂ ಹೇಳುತ್ತಲೇ ಬರಲಾಗುತ್ತಿದೆ.
ಆದರೆ ಕೆಲವರಿಗೆ ಎಷ್ಟೇ ಹೇಳಿದರೂ ಪ್ರಯೋಜನ ಇಲ್ಲ. ತಮಗೇನೂ ಆಗುವುದೇ ಇಲ್ಲ ಎನ್ನುವ ಮನೋಭಾವ. ಇದೇ ಕಾರಣಕ್ಕೆ, ಸರ್ಕಾರ, ಪೊಲೀಸರು, ಮಾಧ್ಯಮಗಳಲ್ಲಿ ಎಷ್ಟೇ ಮಾಸ್ಕ್ ಬಗ್ಗೆ ತಿಳಿಹೇಳಿದರೂ ಅದನ್ನು ಧರಿಸುವುದೇ ಇಲ್ಲ. ಹೀಗೆ ಮಾಸ್ಕ್ ಧರಿಸದೇ ಬೀದಿಗೆ ಇಳಿದರೆ ಭಾರಿ ಪ್ರಮಾಣದ ದಂಡ ವಿಧಿಸುವ ನಿಯಮ ಇದಾಗಲೇ ಹಲವಾರು ಕಡೆಗಳಲ್ಲಿ ಜಾರಿಯಲ್ಲಿದೆ.
ಆದರೆ ಕೆಲವರು ದಂಡಕ್ಕೂ ಜಗ್ಗುತ್ತಿಲ್ಲ. ಇದರಿಂದಾಗಿಯೇ ಇಂಡೋನೇಷ್ಯಾ ಸರ್ಕಾರ ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದೆ.
ಅದೇನೆಂದರೆ ಹೌದು,ಇಂಡೋನೇಷ್ಯಾದ ಜಾವಾದಲ್ಲಿ ಮಾಸ್ಕ್ ಧರಿಸದೇ ಯಾರಾದರೂ ರಸ್ತೆಗೆ ಇಳಿದರೆ ಅಂಥವರು ಸಮಾಧಿ ಗುಂಡಿಗಳನ್ನು ತೋಡಬೇಕು, ಅದೂ ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಹೂಳಲು ಗುಂಡಿಯನ್ನು ಅಗೆಯುವುದು ಕಡ್ಡಾಯ ಮಾಡಲಾಗಿದೆ.
ಕರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಸಮಾಧಿ ಅಗೆಯುವವರ ಕೊರತೆ ಇಲ್ಲಿದೆ. ಇದೆ ಕಾರಣಕ್ಕೆ, ಆ ಕೊರತೆಯನ್ನೂ ನೀಗಿಸಿದಂತಾಯಿತು, ಜತೆಗೆ ಮಾಸ್ಕ್ ಧರಿಸದೇ ರೋಡಿಗಿಳಿಯವವರಿಗೆ ಬುದ್ಧಿಯನ್ನೂ ಕಲಿಸಿದಂತಾಯಿತು ಎಂದು ಸರ್ಕಾರ ಈ ಹೊಸ ಯೋಜನೆ ರೂಪಿಸಿದೆ.
ಯೋಜನೆಯನ್ನು ಇದಾಗಲೇ ಕಾರ್ಯಗತ ಮಾಡಲಾಗಿದ್ದು, ತಪ್ಪಿತಸ್ಥರಿಗೆ ಕಡ್ಡಾಯವಾಗಿ ಗುಂಡಿ ತೋಡಿಸಲಾಗುತ್ತಿದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸದೇ ಹೊರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ಎನ್ನುತ್ತದೆ ಸರ್ಕಾರ.
ಇಂಡೋನೇಷ್ಯಾದಲ್ಲಿ 2,21,253 ಮಂದಿಗೆ ಸೋಂಕು ತಗುಲಿದ್ದು, ನಿನ್ನೆಯವರೆಗೆ ಸೋಂಕಿಗೆ 8,841 ಮಂದಿ ಮೃತಪಟ್ಟಿದ್ದಾರೆ.