

ಲೂಧಿಯಾನಾ (ಪಂಜಾಬ್): ಪಂಜಾಬ್ ಚುನಾವಣೆ ಸನ್ನಿಹಿತ ಆಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳ ಪ್ರಚಾರ ವೇಗ ಪಡೆದುಕೊಳ್ಳುತ್ತಿದೆ. ಇದೇ ವೇಳೆ ಲೂಧಿಯಾನಾಕ್ಕೆ ಬಂದಿದ್ದ ಸಂಸದ ರಾಹುಲ್ ಗಾಂಧಿ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜತೆಗೆ ಟ್ರೋಲ್ ಕೂಡ ಆಗುತ್ತಿದೆ.
ಅಷ್ಟಕ್ಕೂ ರಾಹುಲ್ ಗಾಂಧಿಯವರು ಹೇಳಿದ್ದೇನೆಂದರೆ, ಪಂಜಾಬ್ನ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದ ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ಸಿಧು ಅವರ ಹೃದಯದಲ್ಲಿ ಮತ್ತು ರಕ್ತದಲ್ಲಿ ಪಂಜಾಬ್ ಇದೆ’ ಎಂದರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಸಿಧು ಅವರನ್ನು ಹೊಗಳುವ ಭರದಲ್ಲಿ ‘ಸಿಧು ಅವರನ್ನು ಬೇಕಿದ್ದರೆ ಕತ್ತರಿಸಿ ನೋಡಿ, ಅವರ ರಕ್ತದಲ್ಲಿ ಪಂಜಾಬ್ ಕಾಣಿಸುತ್ತದೆ’ ಎಂದಿದ್ದಾರೆ.
ಆ ಮಾತನ್ನು ಕೇಳಿ ಸಿಧು ಅವರು ಸ್ವಲ್ಪ ಇರುಸುಮುರುಸುಗೊಂಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದ್ದು, ಸಿಧು ಅವರನ್ನು ಕತ್ತರಿಸಿ ನೋಡಿ ಎಂದು ರಾಹುಲ್ ಗಾಂಧಿ ಏಕೆ ಹೇಳಿದರು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಇನ್ನೂ ಒಂದು ಕಾರಣವಿದೆ. ಅದೇನೆಂದರೆ, ಸಿಧು ಅವರು ಸಿಎಂ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದರೂ, ಕಾಂಗ್ರೆಸ್ನ ಮುಂದಿನ ಸಿಎಂ ಅಭ್ಯರ್ಥಿಯೆಂದು ಇದೇ ವೇಳೆ ರಾಹುಲ್ ಗಾಂಧಿ, ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಹೆಸರನ್ನೇ ಉಲ್ಲೇಖಿಸಿ ಸಿಧು ಅವರನ್ನು ಅಸಮಾಧಾನಗೊಳಿಸಿದ್ದರು.
ಇದನ್ನೇ ಮುಂದುಮಾಡಿಕೊಂಡಿರುವ ನೆಟ್ಟಿಗರು, ‘ನೀವು ಸಿಎಂ ಅಭ್ಯರ್ಥಿಯನ್ನು ಚನ್ನಿ ಎಂದು ಘೋಷಿಸಿ ಇದಾಗಲೇ ಸಿಧು ಅವರ ಹೃದಯವನ್ನು ತುಂಡು ಮಾಡಿಬಿಟ್ಟಿದ್ದೀರಿ. ಮತ್ತೇಕೆ ಅವರನ್ನು ಕತ್ತರಿಸಲು ಹೇಳಿದ್ದೀರಿ’ ಎಂದು ಕಾಲೆಳೆದಿದ್ದಾರೆ!
ಅದರ ವಿಡಿಯೋ ಇಲ್ಲಿದೆ ನೋಡಿ: