

ನ್ಯೂಯಾರ್ಕ್: ಅಮೆರಿಕ ಮೂಲಕ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಸಂಸ್ಥೆ ಅಮೇಜಾನ್ 2017 ಮತ್ತು 2019ರಲ್ಲಿ ಭಾರತವನ್ನು ಅವಮಾನ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್ಗಳು ವೆಬ್ಸೈಟ್ನಲ್ಲಿ ಮಾರಾಟಕ್ಕೆ ಇದ್ದವು. ನಂತರ 2019ರಲ್ಲಿ ಹಿಂದೂ ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್ ಸೀಟ್ ಕವರ್ಗಳು, ಬಾಗಿಲು ಮ್ಯಾಟ್ಗಳನ್ನು ಮಾರಾಟಕ್ಕಿಟ್ಟಿತ್ತು. ಆಗ ದೊಡ್ಡಮಟ್ಟದಲ್ಲಿ ವಿರೋಧ ಶುರುವಾದ ಕಾರಣ, ಅಮೆಜಾನ್ ಕ್ಷಮೆ ಕೋರಿತ್ತು.
ಆದರೆ ಈ ಚಾಳಿಯನ್ನು ಅದು ಬಿಟ್ಟಿಲ್ಲ. ಈಗ ಗಣರಾಜ್ಯೋತ್ಸವ ಬರುತ್ತಿರುವ ಬೆನ್ನಲ್ಲೇ ಮತ್ತೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ರಾಷ್ಟ್ರಧ್ವಜದ ಮುದ್ರೆ, ಚಿತ್ರವುಳ್ಳ ವಸ್ತುಗಳನ್ನು ಅಮೆಜಾನ್ ಮಾರಾಟದಲ್ಲಿ ಇಟ್ಟಿದೆ. ಧ್ವಜದ ಚಿತ್ರ ಮುದ್ರಿಸಲಾದ ಟಿ-ಶರ್ಟ್ಗಳು, ಮಾಸ್ಕ್ಗಳು, ಕೀ ಚೈನ್ಗಳು, ಚಾಕಲೇಟ್ ಕವರ್ಗಳು , ಸೆರಾಮಿಕ್ ಮಗ್ಗಳು, ಮಕ್ಕಳ ಬಟ್ಟೆಗಳನ್ನು ಮಾರಾಟಕ್ಕೆ ಇಡಲಾಗಿದೆ.
ಇದರಿಂದ ಗರಂ ಆಗಿರುವ ಭಾರತೀಯರು ಬೈಕಾಟ್ ಹ್ಯಾಷ್‌ಟ್ಯಾಗ್ ಮೂಲಕ ಅಮೆಜಾನ್ ವಸ್ತು ಖರೀದಿ ಮಾಡಬೇಡಿ ಎಂದು ಸಾರುತ್ತಿದ್ದಾರೆ. ಧ್ವಜ ಸಂಹಿತೆ 2022ರ ಪ್ರಕಾರ ಯಾವುದೇ ಉಡುಪಿನ ಭಾಗದಲ್ಲಿ ರಾಷ್ಟ್ರಧ್ವಜ ಮುದ್ರಿಸುವಂತಿಲ್ಲ. ಕುಶನ್ಗಳು, ಕರವಸ್ತ್ರಗಳು, ನ್ಯಾಪ್ಕಿನ್ ಅಥವಾ ಪೆಟ್ಟಿಗೆಗಳ ಮೇಲೆಲ್ಲ ಪ್ರಿಂಟ್ ಅಥವಾ ಕಸೂತಿ ಮಾಡುವಂತಿಲ್ಲ. ಆದರೆ ಅಮೇಜಾನ್ ತನ್ನ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು, ಮಾರ್ಕೆಟಿಂಗ್ ಪ್ರಚಾರಕ್ಕಾಗಿ ಭಾರತದ ಧ್ವಜದ ಚಿತ್ರ ಬಳಸಿಕೊಳ್ಳುತ್ತಿದೆ ಎಂದು ಅನೇಕರು ತಮ್ಮ ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.
ಮಾಸ್ಕ್ನ್ನು ಬಳಸಿ ಸುಡುತ್ತಾರೆ ಇಲ್ಲವೇ ಬಿಸಾಡುತ್ತಾರೆ. ಇದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ. ಆದ್ದರಿಂದ ಅಮೆಜಾನ್ ಎಲ್ಲ ಉತ್ಪನ್ನಗಳನ್ನೂ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರ ಧ್ವಜ ಸಂಹಿತೆಯನ್ನು ಅವಮಾನಿಸಿದ ಅಮೆಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದಾರೆ.