ಪ್ರೇಮ ವಿವಾಹ ಮಾಡಿಕೊಂಡರೆ ಆಸ್ತಿಯ ಹಕ್ಕು ಕಳೆದುಕೊಳ್ಳುತ್ತೇವಾ?

nyayadevate
Published on
ಪ್ರಶ್ನೆ: ನನ್ನದು ಪ್ರೇಮ ವಿವಾಹ. 1999ರಲ್ಲಿ ಮದುವೆ ಆಯಿತು. ನನ್ನ ತಂದೆ 2007ರಲ್ಲಿ ತೀರಿಕೊಂಡಿದ್ದಾರೆ. ನಮ್ಮ ತಂದೆಗೆ ಅವರ ಸ್ವಯಾರ್ಜಿತ ಆಸ್ತಿ ಮತ್ತು ಅವರ ತಂದೆಯಿಂದ ಬಂದ ಆಸ್ತಿ ಇದೆ. ನಾನು ಪ್ರೇಮ ವಿವಾಹ ಮಾಡಿಕೊಂಡಿರುವುದರಿಂದ ನನ್ನ ಹೆಸರನ್ನು ವಾರಸಾ ಪತ್ರಿಕೆಯಿಂದ ತೆಗೆಸಿ ಹಾಕಿದ್ದಾರೆ. ನನ್ನ ತಾಯಿ ಮತ್ತು ಇಬ್ಬರು ತಂಗಿಯರು ನನಗೆ ಮನೆಯೊಳಗೆ ಬರಿಸುತ್ತಿಲ್ಲ. ನನಗೆ ಆಸ್ತಿಯಲ್ಲಿ ಹಕ್ಕು ಇಲ್ಲ ಎನ್ನುತ್ತಿದ್ದಾರೆ. ನನಗೆ ಎರಡು ಗಂಡು ಮಕ್ಕಳು ಇದ್ದು ತುಂಬಾ ಕಷ್ಟದಲ್ಲಿ ಇದ್ದೇನೆ. ನನಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲವೇ?

ಉತ್ತರ: ನೀವು ಹೆದರಬೇಕಾಗಿಲ್ಲ. ಧೈರ್ಯವಾಗಿ ವಿಭಾಗದ ಕೇಸು ಹಾಕಿ. ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮತ್ತು ನಿಮ್ಮ ತಾತನಿಂದ ನಿಮ್ಮ ತಂದೆಗೆ ಬಂದ ಆಸ್ತಿಗಳಲ್ಲಿ ನಿಮಗೆ, ನಿಮ್ಮ ತಾಯಿಗೆ, ನಿಮ್ಮ ಇಬ್ಬರು ತಂಗಿಯರಿಗೆ ನಾಲ್ಕನೇ ಒಂದು ಸಮಪಾಲು ಇರುತ್ತದೆ. ಪ್ರೇಮ ವಿವಾಹ ಮಾಡಿಕೊಂಡರೆ ಆಸ್ತಿಯಲ್ಲಿ ನಿಮ್ಮ ಹಕ್ಕು ಕುಂಠಿತವಾಗುವುದಿಲ್ಲ.

ದಾವೆಯಲ್ಲಿ, ನೀವೂ ನಿಮ್ಮ ತಂದೆಯ ಮಗ ಎನ್ನುವುದನ್ನು ನಿಮ್ಮ ತಾಯಿ ಮತ್ತು ಸೋದರಿಯರು ನಿರಾಕರಿಸಿದರೆ ಆಗ ನೀವು ಆ ವಿಷಯವನ್ನು ಸಾಬೀತು ಪಡಿಸಬೇಕಾಗುತ್ತದೆ. ವಾರಸಾ ಪತ್ರಿಕೆಯಲ್ಲಿ ನಮೂದಾಗಿರುವ ಬಗ್ಗೆ ನೀವು ಹೆಚ್ಚಾಗಿ ಚಿಂತಿಸಬೇಡಿ.

ಪ್ರಕರಣದಲ್ಲಿ ನೋಟಿಸ್ ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ . ಮಧ್ಯಸ್ಥಿಕೆಯಲ್ಲಿ ಏನಾದರೂ ರಾಜೀ ಸೂತ್ರಕ್ಕೂ ಬರಬಹುದು. ವಿಭಾಗದ ದಾವೆಗೆ ನ್ಯಾಯಿಕ ಶುಲ್ಕವೂ ಕಡಿಮೆ ಇರುತ್ತದೆ. ನೀವು ಯೋಚಿಸಬೇಡಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net