

ಬೇರೆ ಬಾಡಿಗೆ ಮನೆ ಮಾಡಿ ಷಹರಿನಲ್ಲಿ ಇಡಿ ಎನ್ನುತ್ತಾಳೆ. ಅದಕ್ಕೆ ನನ್ನ ಹತ್ತಿರ ಹಣವಿಲ್ಲ. ನಾನು ಸಾಧಾರಣ ದರ್ಜೆಯ ಕೃಷಿಕ. ವಯಸ್ಸಾದ ತಂದೆ ತಾಯಿಯನ್ನು ನಾನು ಕೈ ಬಿಡಲು ಆಗುವುದಿಲ್ಲ. ನನ್ನಿಂದ ನಮ್ಮ ಹಿರಿಯರ ಹೊಲ ಮನೆ ಮಾರಿಸಿ ನನ್ನನ್ನು ತಂದೆ ತಾಯಿಯಿಂದ ಬೇರೆ ಮಾಡುವ ಹುನ್ನಾರದಲ್ಲಿ ನನ್ನ ಹೆಂಡತಿ ಇದ್ದಾಳೆ. ಅವಳು ಕೋರ್ಟಿಗೆ ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾಳೆ.
ಅವಳು ಕೋರ್ಟಿಗೆ ಹೋದರೆ ನ್ಯಾಯಾಲಯ ನಾನು ಬೇರೆ ಬಾಡಿಗೆ ಮನೆಯಲ್ಲಿ ಅವಳನ್ನಿಡಬೇಕು ಎಂದು ಆದೇಶ ಮಾಡುತ್ತದೆಯೇ? ನಾನು ದಾಂಪತ್ಯ ಜೀವನದ ಹಕ್ಕು ಪುನರ್ ಸ್ಥಾಪನೆಗೆ ಹಾಕಿದರೆ ಅದು ನಿಲ್ಲುತ್ತದೆಯೇ? ಅವಳು ತೀರ್ಪು ನನ್ನ ಕಡೆ ಆದರೂ , ನನ್ನ ಜೊತೆ ಜೀವನ ಮಾಡಲು ಬರದಿದ್ದರೆ ನಾನು ಡೈವೋರ್ಸಿಗೆ ಹಾಕಬಹುದೇ? ನನ್ನ ಹೆಸರಲ್ಲಿ ಆಸ್ತಿ ಇಲ್ಲ. ನನ್ನ ಕೂಲಿ ಒಂದು ದಿನಕ್ಕೆ 100-150 ರೂಪಾಯಿ. ಅದರಲ್ಲಿ ಅವಳಿಗೆ ಎಷ್ಟು ಕೊಡಬೇಕು? ಹಿರಿಯರ ಆಸ್ತಿಯಲ್ಲಿ ಅವಳಿಗೆ ಹಕ್ಕು ಬರುವುದೇ? ಯಾವಾಗ ಮತ್ತು ಹೇಗೆ ತಿಳಿಸಿ?
ಉತ್ತರ: ನೀವು ಅನಾವಶ್ಯಕವಾಗಿ ವಿಪರೀತವಾಗಿ ಯೋಚಿಸುವುದನ್ನು ಕೈಬಿಡಿ. ಧೈರ್ಯವಾಗಿ ದಾಂಪತ್ಯ ಜೀವನದ ಹಕ್ಕು ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸಿ. ಪ್ರಕರಣದಲ್ಲಿ ನಿಮ್ಮ ಪತ್ನಿಗೆ ನೋಟೀಸು ಜಾರಿ ಆದಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ.
ಮಧ್ಯಸ್ಥಿಕೆಯಲ್ಲಿ ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮಿಬ್ಬರ ಮತ್ತು ಎರಡೂ ಕಡೆಯ ಹಿರಿಯರ ನಡುವೆ ಮಾತುಕತೆ ಆದಾಗ ನಿಮ್ಮ ಎಲ್ಲ ಸಮಸ್ಯೆಗಳಿಗೂ ಒಂದೇ ಬಾರಿಗೆ ಅಂತಿಮ ಪರಿಹಾರ ಸಿಗಬಹುದು. ಒಂದು ವೇಳೆ ನಿಮ್ಮ ಪತ್ನಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಪ್ರಕರಣವನ್ನು ನಡೆಸಿ. ಪ್ರಕರಣದಲ್ಲಿ ತೀರ್ಪು ನಿಮ್ಮ ಕಡೆ ಆದ ಮೇಲೂ ಅವಳು ಅದನ್ನು ಮಾನ್ಯ ಮಾಡದೇ ಹೋದರೆ ಆ ನಂತರ ನೀವು ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸಬಹುದು.
ನಿಮ್ಮ ಪತ್ನಿ ನ್ಯಾಯಾಲಯಕ್ಕೆ ಹೋದರೆ, ನಿಮ್ಮ ಆರ್ಥಿಕ ಮತ್ತು ಸಾಂಸಾರಿಕ ಪರಿಸ್ಥಿತಿಯನ್ನು ಗಮನಿಸಿ ನೀವು ಆಕೆಯನ್ನು ಬೇರೆ ಬಾಡಿಗೆಯ ಮನೆಯಲ್ಲಿ ಇಡಿ ಎನ್ನುವ ಆದೇಶವನ್ನು ನಿಮ್ಮ ವಿರುದ್ಧ ನ್ಯಾಯಾಲಯ ಮಾಡುವ ಸಂಭವ ಬಹಳ ಕಡಿಮೆ ಇರುತ್ತದೆ.
ಇನ್ನು ಜೀವನಾಂಶದ ವಿಷಯಕ್ಕೆ ಬಂದರೆ, ನಿಮ್ಮ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇಲ್ಲದೇ ಹೋದರೆ ನೀವು ಅವಳಿಗೆ ಜೀವನಾಂಶ ಕೊಡಬೇಕಾಗುತ್ತದೆ. ನಿಮ್ಮ ಗಳಿಕೆಯಲ್ಲಿ 1/3 ರಿಂದ 1/5 ರಷ್ಟು ಭಾಗವನ್ನು ಸಾಮಾನ್ಯವಾಗಿ ಜೀವನಾಂಶದ ರೂಪದಲ್ಲಿ ಪತ್ನಿಗೆ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ.
ಹಿಂದು ಪತ್ನಿಗೆ ಪತಿಯ ಆಸ್ತಿಯಲ್ಲಿ ಪತಿ ಬದುಕಿರುವವರೆಗೆ ಯಾವ ಹಕ್ಕೂ ಇರುವುದಿಲ್ಲ. ಹಿಂದೂ ಪತ್ನಿಗೆ ಪತಿಯ ಹಿರಿಯರ ಆಸ್ತಿಯ ಮೇಲೆ ಸಹ ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ತಂದೆ ತಾಯಿ ಬದುಕಿರುವುದರಿಂದ ಅವರ ಆಸ್ತಿಯನ್ನು ನಿಮ್ಮ ಪತ್ನಿ ಕೇಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಅವರು ತೀರಿಕೊಂಡ ಮೇಲೂ ಆಸ್ತಿ ನಿಮಗೆ ಬಂದ ಮೇಲೂ ಅವಳು ಆಸ್ತಿಯಲ್ಲಿ ಹಕ್ಕನ್ನು ಕೇಳಲಾಗುವುದಿಲ್ಲ. ನಿಮ್ಮ ಪತ್ನಿಯ ಹಕ್ಕು ಕೇವಲ ಜೀವನಾಂಶಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು https://www.vijayavani.net/ ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್ ಮಾಡಿದರೆ ಎಲ್ಲವೂ ಲಭ್ಯ.)
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)