

ನನ್ನ ಗಂಡ `ನಿನಗೆ ಬೇಕಿದ್ದರೆ ಡಿವೋರ್ಸ್ ಕೊಡುತ್ತೇನೆ, ಆದರೆ ಮಗು ಮಾತ್ರ ನನಗೆ ಬೇಕೇ ಬೇಕು' ಎನ್ನುತ್ತಿದ್ದಾನೆ. ನಾವು ಇಬ್ಬರೂ ಸೇರಿ ಡಿವೋರ್ಸಿಗೆ ಈಗಲೇ ಹಾಕಬಹುದೇ ಅಥವಾ ಮಗು ಆಗುವವರೆಗೆ ಕಾಯಬೇಕೇ? ಮಗು ಆದರೆ ಅವನು ಮಗುವನ್ನು ತೆಗೆದುಕೊಂಡು ಹೋಗಿಬಿಟ್ಟರೆ ಎನ್ನುವ ಹೆದರಿಕೆ. ಡಿವೋರ್ಸ್ ಈಗಲೇ ಆದರೆ ಅವನಿಗೆ ಮಗುವನ್ನು ಕೇಳುವ ಹಕ್ಕು ಇರುವುದಿಲ್ಲ ಅಲ್ಲವೇ? ನಾನು ಏನು ಮಾಡಬೇಕು ದಯಮಾಡಿ ತಿಳಿಸಿ.
ಉತ್ತರ: ನೀವು ಈಗ ಆತುರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮ ಹೆರಿಗೆ ಆಗಲಿ. ಹಿಂದೂ ವಿವಾಹ ಕಾಯ್ದೆಯ ಕಲಂ 13ರ ಪ್ರಕಾರ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನಕ್ಕೆ ಪ್ರಕರಣ ದಾಖಲಿಸುವಾಗ ನೀವಿಬ್ಬರೂ ಒಂದು ವರ್ಷದಿಂದ ಬೇರೆ ಬೇರೆ ಇರುವುದಾಗಿ ತಿಳಿಸಿರಬೇಕು.
ನೀವು ಈಗ ಐದು ತಿಂಗಳ ಗರ್ಭಿಣಿ ಆಗಿರುವುದರಿಂದ ನೀವಿಬ್ಬರೂ ಒಂದು ವರ್ಷದಿಂದ ಬೇರೆ ಇದ್ದೀರಿ ಎಂದು ಹೇಳಲಾಗುವುದಿಲ್ಲ. ಹೀಗಾಗಿ ನೀವು ಹೆರಿಗೆ ಆಗುವವರೆಗೆ ಕಾದಿರಿ. ನೀವಿಬ್ಬರೂ ಪತಿ ಪತ್ನಿಯಾಗಿ ಜೀವನ ಮಾಡದೇ ಬೇರೆಯಾಗಿದ್ದು ಒಂದು ವರ್ಷ ಆದ ನಂತರ ಬೇಕಿದ್ದರೆ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದು.
ಹಾಗೆ ಒಂದು ವೇಳೆ ನಿಮ್ಮ ಪತಿ ಈ ರೀತಿ ಪ್ರಕರಣ ದಾಖಲಿಸಲು ಮುಂದೆ ಒಪ್ಪದೇ ಹೋದರೆ ನೀವೇ ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಪ್ರಕರಣವನ್ನು ನಂತರ ದಾಖಲಿಸಿ.
ಇನ್ನು ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಕಸ್ಟಡಿಯನ್ನು ತಾಯಿಗೇ ಕೊಡುತ್ತಾರೆ. ನಿಮಗೆ ಹೆದರಿಕೆ ಇದ್ದರೆ, ಮಗುವಾದ ನಂತರ ಬೇಕಿದ್ದರೆ ಮಗುವನ್ನು ನಿಮ್ಮಿಂದ ಪ್ರತ್ಯೇಕಿಸಬಾರದು ಎನ್ನುವ ಆದೇಶ ಪಡೆಯಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ. ನೀವಿಬ್ಬರೂ ವಿಚ್ಛೇದನ ಪಡೆದರೂ ಪಡೆಯದಿದ್ದರೂ ಮಗುವಿಗೆ ನೀವಿಬ್ಬರೇ ಜೈವಿಕ ತಂದೆ ತಾಯಿಗಳಾಗಿರುತ್ತೀರಿ. ಪತಿ ಪತ್ನಿಯರಲ್ಲಿ ವಿಚ್ಛೇದನ ಆದ ಮಾತ್ರಕ್ಕೆ, ಮಕ್ಕಳ ಪಾಲಕರಾಗಿ ಇಬ್ಬರಿಗೂ ಅವರ ಹಕ್ಕು ಮತ್ತು ಬಾಧ್ಯತೆಗಳು ಕುಂಠಿತವಾಗುವುದಿಲ್ಲ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)