

ಅವಳು ನನ್ನನ್ನು ಅವಳ ತವರಿಗೇ ಬಂದು ಅವರ ತಂದೆ ತಾಯಿಯ ಜೊತೆಯಲ್ಲಿಯೇ ಇರಲು ಪೀಡಿಸುತ್ತಿದ್ದಾಳೆ. ಇಲ್ಲದಿದ್ದರೆ ವಿಚ್ಛೇದನ ಕೊಡಲು ಒಂದು ಕೋಟಿ ಜೀವನಾಂಶ ಕೊಡುವಂತೆ ಕೇಳುತ್ತಿದ್ದಾಳೆ. ನಾವು ಮಧ್ಯಮ ವರ್ಗದವರು. ನಮ್ಮ ತಾಯಿಗೆ ಕ್ಯಾನ್ಸರ್ ಆದಾಗಲೂ ಅವಳು ಬರಲಿಲ್ಲ. ನಮ್ಮ ತಾಯಿ ತೀರಿಕೊಂಡರು. ನಂತರ ನಮ್ಮ ತಂದೆಯೂ ತೀರಿಕೊಂಡರು. ನನ್ನ ಮಗನ ಹುಟ್ಟು ಹಬ್ಬ ಮಾಡೋಣ ಎಂದರೂ ನನ್ನ ಹೆಂಡತಿ ಮತ್ತು ಅವಳ ಕಡೆಯವರು ಬಿಡಲಿಲ್ಲ.
ನನ್ನ ಪತ್ನಿ ಕೆಲಸದಲ್ಲಿ ಇದ್ದಾಳೆ. ಕ್ವಾಟರ್ಸನಲ್ಲಿ ಇದ್ದಾಳೆ. ನನ್ನ ಜೊತೆ ಬರಲು ಸಿದ್ಧವಾಗಿಲ್ಲ. ನನಗೂ ಅವಳ ಜೊತೆ ಇರಲು ಸಾಧ್ಯವಿಲ್ಲ. ಈಗ ನಾನು ಡೈವೋರ್ಸ ಪಡೆಯಲು ಲಕ್ಷಾಂತರ ಕೊಡಲು ನನ್ನ ಹತ್ತಿರ ದುಡ್ಡು ಇಲ್ಲ. ಆದರೆ ವಿಚ್ಛೇದನ ಬೇಕು . ನನಗೆ ನನ್ನ ಮಗನ ಕಸ್ಟಡಿ ಬೇಕು? ನಾನು ಏನು ಮಾಡಬಹುದು ಎಂದು ತಿಳಿಸಿ.
ಉತ್ತರ: ಯಾವುದೇ ಪ್ರಕರಣದಲ್ಲಿ ವಿಚ್ಛೇದನವನ್ನು ಒಬ್ಬರು ಮತ್ತೊಬ್ಬರಿಗೆ ಕೊಡುವುದು ಎನ್ನುವುದು ತಪ್ಪು ಕಲ್ಪನೆ. ವಿಚ್ಛೇದನದ ಆದೇಶ ಕೊಡುವುದು ನ್ಯಾಯಾಲಯ. ನಿಮಗೆ ನಿಮ್ಮ ಪತ್ನಿಯಿಂದ ಕ್ರೂರತೆ ಆಗಿದೆ ಎಂದು ಅನ್ನಿಸಿದರೆ ಧೈರ್ಯವಾಗಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ. ಸರಿಯಾದ ಅಂಶಗಳು ಇದ್ದರೆ ನಿಮಗೆ ವಿಚ್ಛೇದನ ಸಿಕ್ಕೇ ಸಿಗುತ್ತದೆ.
ನಿಮ್ಮ ಪತ್ನಿ ಒಳ್ಳೆಯ ನೌಕರಿಯಲ್ಲಿ ಇರುವುದರಿಂದ ನೀವು ಲಕ್ಷಾಂತರ ರೂಪಾಯಿ ಪರಿಹಾರವಾಗಲೀ, ಜೀವನಾಂಶವಾಗಲೀ ಕೊಡಬೇಕಿರುವುದಿಲ್ಲ. ನೀವು ಹೆದರಬೇಕಾಗಿಲ್ಲ.
ನಿಮ್ಮ ಮಗು ಇನ್ನೂ ಸಣ್ಣವನಾಗಿರುವುದರಿಂದ ನಿಮಗೆ ಈಗಲೇ ಮಗುವಿನ ಕಸ್ಟಡಿ ಸಿಗುವುದಿಲ್ಲ. ಐದು ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಸುಪರ್ದನ್ನು ಸಾಮಾನ್ಯವಾಗಿ ತಾಯಿಗೇ ಕೊಡಲಾಗುತ್ತದೆ. ಆದರೆ ನೀವು ಮಗು ಐದು ವರ್ಷ ಆದ ಮೇಲೆ ನಿಮಗೆ ಕಸ್ಟಡಿ ಕೊಡಬೇಕೆಂದೂ , ಅಲ್ಲಿಯವರೆಗೆ ಮಗುವನ್ನು ಆಗಾಗ ನೋಡಲು, ಭೇಟಿಯಾಗಲು, ಅದರ ಜೊತೆ ಸಮಯ ಕಳೆಯಲು ಅವಕಾಶ ಮಾಡಿಕೊಡಬೇಕು ಎಂದೂ ಪ್ರಕರಣ ದಾಖಲಿಸಿ. ನ್ಯಾಯಾಲಯ ಸೂಕ್ತ ಆದೇಶವನ್ನು ಮಾಡುತ್ತದೆ. ನೀವು ಯಾವುದಕ್ಕೂ ಹೆದರಬೇಕಾಗಿಲ್ಲ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)