ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?

nyayadevate
Published on
ಪ್ರಶ್ನೆ: 12 ಲಕ್ಷ ಹಣ ಖರ್ಚು ಮಾಡಿ ಮದುವೆ ಆದೆ. ಹೆಂಡತಿ ಮದುವೆ ಆದ ದಿನದಿಂದಲೇ ನನ್ನ ಜೊತೆ ಸೇರಲಿಲ್ಲ. ಸ್ವಲ್ಪ ಸಮಯ ಬೇಕು ಎಂದಳು. ಮೂರು ತಿಂಗಳಾದರೂ ಮುಟ್ಟಲು ಬಿಡಲಿಲ್ಲ. ಬಲವಂತ ಮಾಡಿದಾಗಲೆಲ್ಲ ಇನ್ನೂ ಸ್ವಲ್ಪ ಸಮಯ ಬೇಕು ಎನ್ನುತ್ತಿದ್ದಳು. ಎಷ್ಟು ತಿಂಗಳಾದರೂ ಅವಳು ಬದಲಾಗಲಿಲ್ಲ.

ಆಮೇಲೆ ಒಂದು ರಾತ್ರಿ ಧೈರ್ಯವಾಗಿ ಅವಳ ಬಳಿ ಸೇರಲು ಪ್ರಯತ್ನ ಮಾಡಿದರೆ ಜೋರಾಗಿ ಕಿರಿಚಿಕೊಂಡು ತಲೆ ಕೂದಲನ್ನೆಲ್ಲ ಬಿಚ್ಚಿಕೊಂಡು ಬೀದಿಗೆ ಬಂದುನಿಂತಳು. ಆಮೇಲೆ ನಾನೇ ಸುಮ್ಮನಾದೆ. ಮತ್ತೆ ಆರು ತಿಂಗಳು ಸುಮ್ಮನೆ ಬಿಟ್ಟು ಅವಳ ಹತ್ತಿರ ಹೋದಾಗ `ನಾಳೆ' ಎಂದು ಹೇಳಿದವಳು ತವರಿಗೆ ಹೋಗಿಬಿಟ್ಟಿದ್ದಾಳೆ. ಈಗ ಬರಲು ಒಪ್ಪುತ್ತಿಲ್ಲ. ಡಿವೋರ್ಸ್ ಬೇಕು ಎನ್ನುತ್ತಿದ್ದಾಳೆ. ನನಗೆ ಹಣವೂ ಇಲ್ಲ ಹೆಂಡತಿಯೂ ಇಲ್ಲ ಎನ್ನುವಂತಾಗಿದೆ. ನನಗೆ ಈಗಲೇ 35 ವರ್ಷ. ಅವಳು ನನ್ನ ಜೊತೆ ವೈವಾಹಿಕ ಜೀವನ ಮಾಡಲು ಕೋರ್ಟಿನ ಆದೇಶ ಪಡೆಯುವುದು ಹೇಗೆ? ಮದುವೆಗೆ ನಾನು ಖರ್ಚು ಮಾಡಿದ ಹಣವಾದರೂ ವಾಪಸ್ ಬರುತ್ತದೆಯೇ? ಅದನ್ನು ಹೇಗೆ ಪಡೆಯಬಹುದು? ದಯವಿಟ್ಟು ತಿಳಿಸಿ.

ಉತ್ತರ: ಪತ್ನಿ ಸಕಾರಣವಿಲ್ಲದೆ ತೊರೆದು ಹೋದಾಗ ಪತಿಯಾದವನು, ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ /ರೆಸ್ಟಿಟ್ಯೂಷನ್ ಆಫ್​ ಕಾಂಜುಗಲ್ ರೈಟ್ಸ್‍ಗೆ ಪ್ರಕರಣ ದಾಖಲಿಸಬಹುದು.

ಹಾಗೆ ನೀವು ಕೇಸು ದಾಖಲಿಸಿದಾಗ ನಿಮ್ಮ ಪತ್ನಿಗೆ ನೋಟಿಸ್ ಜಾರಿಯಾದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಿಕೊಡಲು ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳಿ.

ಮಧ್ಯಸ್ಥಿಕೆಯಲ್ಲಿ ನೀವಿಬ್ಬರೂ ಕೂತು ಮಾತಾಡಿ ಇತ್ಯರ್ಥಕ್ಕೆ ಬರಬಹುದು. ಪತ್ನಿ ಒಪ್ಪಿದರೆ ನೀವಿಬ್ಬರೂ ವಿವಾಹ ಸಂಧಾನಕಾರರ ಹತ್ತಿರ ಅಥವಾ ಲೈಂಗಿಕ ತಜ್ಞರ ಹತ್ತಿರ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಹೆಂಡತಿಯ ಮೇಲೆ ಕೇಸು ಹಾಕಲು ಇಷ್ಟ ಇಲ್ಲದೆ ಹೋದರೆ, ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಪತ್ನಿಯನ್ನು ಕರೆಸಬೇಕೆಂದು ನಿಮ್ಮ ಊರಿನ ನ್ಯಾಯಾಲಯದ ಮಧ್ಯಸ್ಥಿಕಾ ಕೇಂದ್ರಕ್ಕೆ ಅರ್ಜಿ ಕೊಡಿ.

ಅಲ್ಲಿ ಇಬ್ಬರನ್ನೂ ಕರೆಸಿ ಮಧ್ಯಸ್ಥಿಕೆ ಮಾಡುತ್ತಾರೆ. ವೃಥಾ ನಿಮ್ಮ ಹಣವನ್ನು, ವಯಸ್ಸನ್ನೂ ಸಮಯವನ್ನೂ ಕಳೆದುಕೊಳ್ಳದೆ ಮೊದಲಿಗೆ ಈ ಪ್ರಯತ್ನ ಮಾಡಿ. ನ್ಯಾಯಾಲಯದಲ್ಲಿ ನೀವು ಪ್ರಕರಣ ದಾಖಲಿಸಿ ಅವಳು ನಿಮ್ಮ ಜೊತೆ ಬರಬೇಕೆಂದು ಆದೇಶ ಆದರೂ ಆಕೆ ನಿಮ್ಮ ಜೊತೆ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಾರೆಯೇ ಎನ್ನುವುದು ಮುಖ್ಯ ಪ್ರಶ್ನೆ. ದಾಂಪತ್ಯ ಜೀವನದ ಇಂತಹ ಜಟಿಲ ವಿಚಾರಗಳ ಬಗ್ಗೆ ಕೂತು ಮಾತಾಡಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

ಇನ್ನು ನೀವು ಮದುವೆಗಾಗಿ ಖರ್ಚು ಮಾಡಿದ ಹನ್ನೆರಡು ಲಕ್ಷ ರೂ. ಹಣ ವಾಪಸ್ ಪಡೆಯಲು ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net