

ನಾನು ಅವರ ಮೇಲೆ ಜೀವನಾಂಶದ ಕೇಸು ಹಾಕಿ ಆದೇಶ ಪಡೆದಿದ್ದೇನೆ. ಜೀವನಾಂಶ ಕೊಟ್ಟ ಮೇಲೆ ನಿನ್ನ ಜೊತೆ ನಾನು ಇರಬೇಕಿಲ್ಲ ಎನ್ನುತ್ತಿದ್ದಾರೆ. ಹಾಗೆ ಕಾನೂನು ಇದೆಯೇ ತಿಳಿಸಿ.
ಉತ್ತರ: ಜೀವನಾಂಶದ ಆದೇಶ ಆದ ಮೇಲೆ ದಂಪತಿಗಳು ಒಟ್ಟಾಗಿ ಇರಬಾರದು ಎಂದು ಕಾನೂನಿನಲ್ಲಿ ಇಲ್ಲ.
ಯಾವುದೇ ಸಕಾರಣ ಇಲ್ಲದೆ , ತಮ್ಮನ್ನು ತಾವೇ ಪೋಷಿಸಿಕೊಳ್ಳಲು ಅಸಮರ್ಥರಾದ , ಹಾಗೂ , ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸಲು ನಿರ್ಲಕ್ಷ್ಯ ಮಾಡಿದ ಪತಿಯ ವಿರುದ್ಧ ಜೀವನಾಂಶದ ಕೇಸು ಹಾಕಲಾಗುತ್ತದೆ. ನೀವು ಹಾಗೆ ಪ್ರಕರಣ ದಾಖಲಿಸಿ ಜೀವನಾಂಶದ ಆದೇಶ ಪಡೆದಿರುತ್ತೀರಿ. ಈಗ ನಿಮ್ಮ ಪತಿ, ಸ್ವ ಇಚ್ಛೆಯಿಂದ ವಾಪಸ್ಸು ಬಂದು ನಿಮ್ಮ ಜೊತೆ ಇರಬಹುದು.
ಆತ ಕುಟುಂಬದ ಜವಾಬ್ದಾರಿ ನೋಡಿಕೊಂಡರೆ ಜೀವನಾಂಶವನ್ನು ಪ್ರತ್ಯೇಕವಾಗಿ ಕೊಡಬೇಕಿರುವುದಿಲ್ಲ. ನಿಮ್ಮ ಜೊತೆಯಲ್ಲಿಯೇ ಇದ್ದು ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ಕೊಡುತ್ತಾ ಹೋಗಲು , ನಿಮ್ಮ ಪತಿ ಒಪ್ಪದೇ ಇರಬಹುದು. ಆದ್ದರಿಂದ ನೀವು ನಿಮ್ಮತಾಲ್ಲೂಕಿನ ಮಧ್ಯಸ್ಥಿಕಾ ಕಾಂದ್ರಕ್ಕೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಬೇಕೆಂದು ಅರ್ಜಿ ಕೊಡಿ.
ಅಲ್ಲಿಗೆ ನಿಮ್ಮನ್ನೂ ನಿಮ್ಮ ಪತಿಯನ್ನೂ ಕರೆಯಿಸಿ ನುರಿತ ಮಧ್ಯಸ್ಥಿಕೆಗಾರರು, ನಿಮ್ಮಿಬ್ಬರ ಮಧ್ಯೆ ಒಪ್ಪಂದಕ್ಕೆ ಬರಲು ವ್ಯವಸ್ಥೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ಪತಿ ಕುಟುಂಬದ ಜವಾಬ್ದಾರಿ ಹೊರಲು ಮತ್ತು ನಿಮ್ಮ ಜೊತೆಗೇ ಇರಲು ಒಪ್ಪಿದರೆ, ಈಗ ಆಗಿರುವ ಆದೇಶವನ್ನು, ಈ ಹಿನ್ನೆಲೆಯಲ್ಲಿ ಮಾರ್ಪಾಡು ಮಾಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಹಾಕಬಹುದು. ಆಗ , ಈಗಾಗಲೇ ನಿಮ್ಮ ಪರವಾಗಿ ಇರುವ ಜೀವನಾಂಶದ ಆದೇಶ ಚಾಲ್ತಿಯಲ್ಲಿ ಇರದಂತೆ ನ್ಯಾಯಾಲಯ ಆದೇಶ ಮಾಬಹುದು.
ಮುಂದೆ ಮತ್ತೆ ನಿಮ್ಮ ಪತಿ ನಿಮ್ಮಗಳ ಪಾಲನೆ ಪೋಷಣೆಗೆ, ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಮತ್ತೆಯೂ ನೀವು ಪ್ರಕರಣ ಹೊಸದಾಗಿ ಸಲ್ಲಿಸಬಹುದು.