

ಉದಯಪುರ (ಆಂಧ್ರಪ್ರದೇಶ): ಪಬ್ಜಿ ಆಟ ಭಾರತದಲ್ಲಿ ಬ್ಯಾನ್ ಆಗಿದ್ದರೂ, ಅದನ್ನು ಬ್ಯಾನ್ ಆಗುವ ಮೊದಲೇ ಡೌನ್ಲೋಡ್ ಮಾಡಿಕೊಂಡವರು ಆಡಲು ಅವಕಾಶ ಇರುವುದರಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಇದೇ ಆಟ ಈಗ ಕಾಂಗ್ರೆಸ್ ಮುಖಂಡನ ಪುತ್ರನೊಬ್ಬನ ಬಲಿ ಪಡೆದಿದೆ.
ಪಬ್ಜಿ ಆಡುವ ಸಮಯದಲ್ಲಿ ಆತ ಅದರಲ್ಲಿ ಸೋತಿದ್ದ. ಇದಕ್ಕೆ ಆತನ ಸ್ನೇಹಿತರು ಗೇಲಿ ಮಾಡಿದ್ದರು. ಇದರಿಂದ ನೊಂದುಕೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ, ಉದಯಪುರದ ಜಿಲ್ಲಾ ಪರಿಷತ್ ಸದಸ್ಯ ಶಾಂತಿರಾಜ್ ಎನ್ನುವವರ 16 ವರ್ಷ ಮಗ ಇಂಥದ್ದೊಂದು ದುರಂತ ಸಾವು ಕಂಡಿದ್ದಾನೆ.
ಮನೆಯಲ್ಲಿ ಇದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಸದಾ ಪಬ್ಜಿ ಆಟವಾಡುತ್ತಿದ್ದ. ಸ್ನೇಹಿತರ ಜತೆ ಆಡುವಾಗ ಆತ ಸೋತಿದ್ದಾನೆ. ಅದಕ್ಕೆ ಸ್ನೇಹಿತರು ಅಪಹಾಸ್ಯ ಮಾಡಿದ್ದರು ಎನ್ನಲಾಗಿದೆ.
ಕೂಡಲೇ ಕೋಣೆಗೆ ಹೋದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ನಡೆದಿದೆ.