

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು ಸೋನಾಕ್ಷಿ ಸಿಂಗ್. ಸದ್ಯ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಇವರ ಜನಪ್ರಿಯತೆಯೇನೂ ಕಡಿಮೆಯಾಗಿಲ್ಲ. ಇದೀಗ ಇದೇ ನಟಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಇವರ ವಿರುದ್ಧ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಅಷ್ಟಕ್ಕೂ ಇವರು ಮಾಡಿರುವ ವಂಚನೆ ಏನು ಗೊತ್ತಾ? ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬರುವುದಾಗಿ ಹೇಳಿ 37 ಲಕ್ಷ ರೂಪಾಯಿಗಳನ್ನು ಪಡೆದು ಕೈಕೊಟ್ಟಿದ್ದಾರೆ! ಮೊರಾದಾಬಾದ್‍ನ ಕಟ್ಘರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಮೋದ್ ಶರ್ಮಾ ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ದೆಹಲಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಮುಂಗಡ ಹಣವಾಗಿ 37 ಲಕ್ಷ ರೂಪಾಯಿಗಳನ್ನೂ ನೀಡಲಾಗಿತ್ತು. ಆದರೆ ಬರುವುದಾಗಿ ಹೇಳಿದ್ದ ನಟಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ, ಮಾತ್ರವಲ್ಲದೇ ದುಡ್ಡನ್ನೂ ವಾಪಸ್ ಕೊಡಲಿಲ್ಲ!
ಇದರಿಂದ ಸಿಟ್ಟಿಗೆದ್ದಿರುವ ಶರ್ಮಾ ಅವರು, ನಟಿ ವಿರುದ್ಧ ಕೇಸ್ ಹಾಕಿದ್ದಾರೆ. ಈವೆಂಟ್ ಆಯೋಜಕರಿಗೆ ಹಣ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದರಿಂದ ದೂರು ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗೆ ಕೋರ್ಟ್‌ನಿಂದ ಹಲವಾರು ಬಾರಿ ನೋಟಿಸ್ ಜಾರಿಯಾಗಿದ್ದರೂ ಸೋನಾಕ್ಷಿ ತಲೆ ಕೆಡಿಸಿಕೊಳ್ಳಲಿಲ್ಲ. ಖುದ್ದು ಆಗಲೀ, ವಕೀಲರ ಮೂಲಕವಾಗಲೀ ಕೋರ್ಟ್‌ಗೆ ಬರಲಿಲ್ಲ.
ಈ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ನಟಿಗೆ ಬಂಧನದ ಭೀತಿ ಉಂಟಾಗಿದೆ.
ಇದರ ನಡುವೆಯೇ ಸಲ್ಮಾನ್ ಖಾನ್ ಜತೆ ಸೋನಾಕ್ಷಿಗೆ ಮದ್ವೆಯಾಗಿದೆ ಎನ್ನುವ ಸುದ್ದಿ ಹಾಗೂ ಕೆಲವು ಫೋಟೋಗಳು ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನಂತರ ಅವೆಲ್ಲವೂ ಫೇಕ್ ಎನ್ನುವುದು ತಿಳಿದಿದೆ. ಸಲ್ಮಾನ್ ಖಾನ ಸೋನಾಕ್ಷಿಗೆ ಉಂಗುರ ತೊಡಿಸುತ್ತಿರುವ ಫೋಟೋ ಇದಾಗಿದ್ದು, ಫ್ಯಾಕ್ಟ್‌ಚೆಕ್‌ನಲ್ಲಿ ಇದು ತಿರುಚಿರುವ ಫೋಟೋ ಎಂದು ತಿಳಿದಿದೆ.