

ಇಂದೋರ್ (ಮಧ್ಯಪ್ರದೇಶ): ಅತ್ತ ರಷ್ಯಾ ಯೂಕ್ರೇನ್ ಮೇಲೆ ಘನಘೋರ ಯುದ್ಧ ನಡೆಸುತ್ತಿದೆ. ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ತಾಯ್ನಾಡಿಗೆ ವಾಪಸಾಗಲು ಸಾಧ್ಯವಾಗದೇ ಎಷ್ಟೋ ಮಂದಿ ಪರಿತಪಿಸುತ್ತಿದ್ದಾರೆ. ಇವುಗಳ ನಡುವೆಯೇ ರಷಿಯನ್ ಯುವತಿಯೊಬ್ಬಳು ಭಾರತೀಯ ಯುವಕನನ್ನು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದಾಳೆ.
ಮಧ್ಯಪ್ರದೇಶದ ಇಂದೋರ್ನ ಸಪ್ತಶೃಂಗಿ ನಗರದ ನಿವಾಸಿ, ಹೈದರಾಬಾದ್ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಯುವಕ ರಿಷಿ ವರ್ಮಾ ಹಾಗೂ ರಷ್ಯಾದ ಲೀನಾ ಬಾರ್ಕೋಲ್ಟೆಸಿವ್ ಅವರ ವಿಭಿನ್ನ ಪ್ರೇಮ್ ಕಹಾನಿ. ರಷಿಯನ್ ಬೆಡಗಿಯ ಫೋಟೋ ಕ್ಲಿಕ್ಕಿಸುತ್ತಲೇ ಹೃದಯ ಕದ್ದ ಭಾರತೀಯನ ಕಥೆಯಿದು.
ರಿಷಿ ವರ್ಮಾ ಅವರು 2019 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಅವರು ಪ್ರವಾಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಲೀನಾ ಅವರ ಪರಿಚಯವಾಗಿದೆ. ಫೋಟೋ ಕ್ಲಿಕ್ಕಿಸಲು ರಿಷಿ ಲೀನಾ ಅವರನ್ನು ಕರೆದರು. ಹೀಗೆ ಬೇರೆ ಬೇರೆ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸುವಾಗಲೇ ಇಬ್ಬರ ನಡುವೆ ಮಾತುಕತೆ ಶುರುವಾಗಿ ಸ್ನೇಹವೂ ಆಗಿ, ಪ್ರೇಮಕ್ಕೆ ತಿರುಗಿದೆ!
ಫೋನ್ ನಂಬರ್ ವಿನಿಮಯವಾಗಿ ಪ್ರೇಮಕಥೆ ಮದುವೆಯಾಗುವವರೆ ಬಂದಿತು. ಮೊದಲು ರಿಷಿ ಇಟ್ಟ ಪ್ರಪೋಸಲ್ಗೆ ಲೀನಾ ಒಪ್ಪಿಕೊಂಡಿದ್ದಾರೆ. ಆಗ ಕರೊನಾ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ಇದೀಗ ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.
ಅಂದಹಾಗೆ ರಷ್ಯಾ ಮೂಲದ ಲೀನಾಗೆ ಭಾರತೀಯ ಆಹಾರ ಅಂದರೆ ತುಂಬಾ ಇಷ್ಟವಂತೆ. ಅವರು ದೇವಸ್ಥಾನಗಳಿಗೂ ಹೋಗುತ್ತಾರೆ. ಭಾರತೀಯ ಆಹಾರ ಮತ್ತು ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ ಎನ್ನುತ್ತಾರೆ, ಹೇಳಿಕೇಳಿ ಗಂಡ ಬಾಣಸಿಗ ಕೇಳಬೇಕೆ?