ಮುಂಬೈ: ಇಂದು ಬೆಳಗ್ಗೆಯಿಂದ ವಾಣಿಜ್ಯನಗರಿ ಮುಂಬೈನ ಬಹುತೇಕ ಕಡೆಗಳಲ್ಲಿ ಕರೆಂಟ್ ಕೈಕೊಟ್ಟಿದೆ. ಇದರಿಂದಾಗಿ ಜನರು ಪರದಾಡುತ್ತಿದ್ದಾರೆ.
ಹೇಳಿಕೇಳಿ ಇರುವ ವಾಣಿಜ್ಯನಗರಿ. ಇಲ್ಲಿಯ ಬಹುತೇಕ ಕೆಲಸಗಳಿಗೆ ವಿದ್ಯುಚ್ಛಕ್ತಿಯ ಅವಶ್ಯಕತೆ ಇದ್ದೇ ಇದೆ. ಆದರೆ ವಿದ್ಯುತ್ ಕೈಕೊಟ್ಟಿದ್ದರಿಂದ ಮನೆಗಳ ಕೆಲಸ ಕಾರ್ಯಗಳು ಮಾತ್ರವಲ್ಲದೇ ಬಹುತೇಕ ಕಾರ್ಖಾನೆಗಳೂ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿ ಬಂತು.
ಇದರಿಂದಾಗಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬಿಎಸ್‌ಇಟಿ) ಟ್ವಿಟರ್ ಖಾತೆಗೆ ಮೆಸೇಜ್ಗಳ ಮಹಾಪೂರವೇ ಹರಿದುಬಂದಿದೆ.
ಟಾಟಾದಿಂದ ಪೂರೈಕೆಯಾಗಬೇಕಿರುವ ವಿದ್ಯುತ್ನಲ್ಲಿ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಸಮಸ್ಯೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ, ದಯವಿಟ್ಟು ಕ್ಷಮಿಸಿ ಎಂದು ಬಿಎಸ್‌ಇಟಿ ಕ್ಷಮೆ ಕೋರಿದೆ.
ಇದರ ಹೊರತಾಗಿಯೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ (ಬಿಎಸ್ಇ) ಯಾವುದೇ ಸಮಸ್ಯೆ ಉಂಟಾಗಿಲ್ಲ, ಜನರು ಹೆದರುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಲಾಗಿದೆ. ಬಿಎಸ್ಇ ವಿದ್ಯುತ್ ಕಡಿತದ ಹೊರತಾಗಿಯೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.