ಅಪ್ಪಳಿಸಲಿದೆ 'ನಿವಾರ್​' ಚಂಡಮಾರುತ- ರೆಡ್​ ಅಲರ್ಟ್​ ಘೋಷಣೆ

nivar
Published on

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಅಪ್ಪಳಿಸಲಿದ್ದು ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ತಮಿಳುನಾಡು ರಾಜ್ಯಾದ್ಯಂತ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಈ ಚಂಡಮಾರುತಕ್ಕೆ 'ನಿವಾರ್ ' ಎಂದು ಹೆಸರಿಡಲಾಗಿದ್ದು, ಉತ್ತರ ತಮಿಳುನಾಡು ಕರಾವಳಿಯತ್ತ ಹೆಜ್ಜೆ ಇಡುತ್ತಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಮಳೆಯಾಗಬಹುದು.

ಸಮುದ್ರ ತೀರದಲ್ಲಿ 80ರಿಂದ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರಿ ಬಿರುಗಾಳಿ ಸೃಷ್ಟಿಯಾಗಿದೆ. ಅದು 24 ಗಂಟೆಯಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಂಡು ತಮಿಳುನಾಡಿಗೆ ಅಪ್ಪಳಿಸಲಿದೆ. ನಾಗಪಟ್ಟಣಂ, ತಂಜಾವೂರು, ಪುದುಕೊಟ್ಟೈ, ತಿರುವಾರೂರು,ರಾಮನಾಥಪುರಂ ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ಹೆಚ್ಚಾಗಿ ಇರಲಿದೆ. ನವೆಂಬರ್ 25ರ ವೇಳೆಗೆ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಹಾದು ಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 22 ರಿಂದ 25 ರ ವರೆಗೆ ನೈಋತ್ಯ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿ, ಮನ್ನಾರ್ ಕೊಲ್ಲಿ ಮತ್ತು ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪ್ರದೇಶ ಕರಾವಳಿಗಳಲ್ಲಿ ಹಾದು ಹೋಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net