

ತಿರುವನಂತಪುರ: ಆಯಸ್ಸು ಗಟ್ಟಿಯಿದ್ದರೆ ಎಂಥ ಕಠೋರ ಸ್ಥಿತಿ ಬಂದರೂ ಸಾಯುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿ ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ನಾಯಿ. ಇವೆರಡರ ಸಮ್ಮಿಳನ ಎಂಬಂತೆ ಸಾಕುನಾಯಿಯೊಂದು ತನ್ನ ಯಜಮಾನನ ಕುಟುಂಬ 9 ಮಂದಿಯ ಜೀವವನ್ನು ಉಳಿಸಿದ ಘಟನೆಯೊಂದು ನಡೆದಿದೆ.
ಸಿಟ್ಟಿಗೆದ್ದಿದ್ದ ಒಂಟಿಸಲಗವೊಂದು ಇನ್ನೇನು ಈ ಒಂಬತ್ತು ಮಂದಿಯ ಪ್ರಾಣವನ್ನು ತೆಗೆಯಲು ರೆಡಿ ಆಗುತ್ತಿದ್ದಂತೆಯೇ ನಾಯಿಯೊಂದು ಎಲ್ಲರನ್ನೂ ಕಾಪಾಡಿರುವ ಘಟನೆ ಇದಾಗಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಕೇರಳದ ಉದಿರಂಕುಲಂನ ಸುಂದರ್ ಅವರ ಕುಟುಂಬದ ಜತೆ. ಅಷ್ಟಕ್ಕೂ ಆಗಿದ್ದೇನೆಂದರೆ,ಈ ಕುಟುಂಬ ಅಲ್ಲಿಯೇ ಚಿಕ್ಕದಾದ ಶೆಡ್ ಕಟ್ಟಿಕೊಂಡು ವಾಸವಾಗಿದೆ. ಕರಿಮುರಿಯಂ ಅರಣ್ಯ ಪ್ರದೇಶದವಿದು.
ಗಡದ್ದಾಗಿ ನಿದ್ದೆ ಮಾಡಿದ್ದ ಸುಂದರನ್ ಹಾಗೂ ಅವರ ಪತ್ನಿ ಸೀತಾ ಅವರನ್ನು ನಾಯಿ ಎಚ್ಚರಿಸಿದೆ. ನಾಯಿಯ ವಿಚಿತ್ರ ಕೂಗಿನಿಂದ ಎಚ್ಚರಗೊಂಡ ದಂಪತಿ ಏನೋ ಅನಾಹುತವಾಗಿದೆ ಎಂದು ತಿಳಿದು ಶೆಡ್ ಹೊರಕ್ಕೆ ಬರುವಷ್ಟರಲ್ಲಿಯೇ ಆನೆಯ ಸೊಂಡಿಲು, ಆನೆಯ ಕಾಲು ಎಲ್ಲವೂ ಶೆಡ್ ಮೇಲೆ ಇದೆ!
ಅರೆಕ್ಷಣವಾಗಿದ್ದರೂ ಮನೆಯಲ್ಲಿ ಇದ್ದ ಎಲ್ಲರೂ ಆನೆಯ ಕಾಲ್ತುಳಿತಕ್ಕೆ ಒಳಗಾಗುತ್ತಿದ್ದರು. ಆನೆಯ ಆವೇಷ ಕಂಡು ಬೆದರಿಹೋದ ದಂಪತಿ ಅಲ್ಲಿಯೇ ಮಲಗಿದ್ದ ಇತರರನ್ನು ಎಚ್ಚರಿಸಿ, ಮಕ್ಕಳನ್ನು ಎಳೆದುಕೊಂಡು ಶರವೇಗದಲ್ಲಿ ಹೊರಕ್ಕೆ ಬಂದಿದ್ದಾರೆ.
ಇತ್ತ ಜಿಮ್ಮಿ ಕೂಡ ಆನೆಯನ್ನು ಓಡಿಸುವಲ್ಲಿ ನಿರತವಾಗಿತ್ತು. ಕ್ಷಣಾರ್ಧದಲ್ಲಿಯೇ ನೋಡನೋಡುತ್ತಿದ್ದಂತೆಯೇ ಕಾಡಾನೆ ಅವರ ಶೆಡ್ ನ ಛಾವಣಿಯನ್ನು ನಾಶಮಾಡಿ ಒಳಗಡೆ ನುಗ್ಗಿದೆ. ನಂತರ ಎಲ್ಲರೂ ಸೇರಿ ಆನೆಯನ್ನು ಓಡಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅದೇಕೋ ಸಿಟ್ಟುಗೊಂಡಿದ್ದ ಆನೆ ಅವರ ಶೆಟ್ ಸುತ್ತಲೂ 10 ನಿಮಿಷಕ್ಕೂ ಹೆಚ್ಚು ಕಾಲ ಓಡಾಟ ನಡೆಸಿ ಸಿಕ್ಕದ್ದನ್ನೆಲ್ಲಾ ತುಳಿದು ನಾಶಮಾಡಿದೆ. ಅವರ ಮನೆ ಸಮೀಪವಿದ್ದ ತೋಟವನ್ನೂ ನಾಶಮಾಡಿ ಹೋಗಿದೆ.
ಆದರೆ ಸದ್ಯ ಜಿಮ್ಮಿಯಿಂದಾಗಿ ಕುಟುಂಬದ ಒಂಬತ್ತು ಮಂದಿ ಜೀವಾಪಾಯದಿಂದ ಪಾರಾಗಿದ್ದಾರೆ.