

ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಜೋರಾಗಿದೆ. ಈ ಹೊಸ ಕಾಯ್ದೆಯಿಂದ ರೈತರಿಗೆ ಸಾಕಷ್ಟು ಅನುಕೂಲಗಳು ಇರುವುದಾಗಿ ಇದಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಸಾಕಷ್ಟು ತಜ್ಱರು ಹೇಳಿದ್ದರೂ, ರೈತರ ದಾರಿ ತಪ್ಪಿಸುವ ದೊಡ್ಡ ತಂಡವೇ ರಚನೆಯಾಗಿದೆ.
ಸುಖಾಸುಮ್ಮನೆ ವಿರೋಧ ಮಾಡಬೇಕು ಎನ್ನುವ ಒಂದೇ ಕಾರಣಕ್ಕೆ ರೈತರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುವ ಮೂಲಕ ಅವರ ದಾರಿ ತಪ್ಪಿಸಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.
ಈ ಕುರಿತು ವಿರೋಧ ವ್ಯಕ್ತಪಡಿಸುವವರಿಗೆ ಸವಾಲು ಹಾಕಿರುವ ಸಚಿವೆ, ಕಾಯ್ದೆಯ ಯಾವ ಅಂಶವು ರೈತರಿಗೆ ಹಾನಿ ಮಾಡುತ್ತದೆ ಎಂಬುದನ್ನು ತೋರಿಸಿ, ಕಾಯ್ದೆಯ ಯಾವ ಅಂಶವು ನಿಮಗೆ ಸರಿ ಕಾಣುತ್ತಿಲ್ಲ? ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂದು ದಯವಿಟ್ಟು ಹೇಳಿ. ನಾನು ನಿಮಗೆ ಉತ್ತರಿಸಲು ಸಾಧ್ಯವಿಲ್ಲದ ಒಂದೇ ಒಂದು ಪ್ರಶ್ನೆ ಕೇಳಿ. ಈ ಕಾಯ್ದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ನಿಮಗೆ ಅನ್ನಿಸಿರುವ ಯಾವುದಾದರೂ ಪ್ರಶ್ನೆ ಕೇಳಿ. ಅದಕ್ಕೆ ಉತ್ತರಿಸಲು ಸಿದ್ಧ. ಅದನ್ನು ಬಿಟ್ಟು ರೈತರಿಗೆ ದಾರಿ ತಪ್ಪಿಸುವ ಕೆಲಸ ಮಾಡುವುದೇಕೆ ಎಂದು ಸವಾಲು ಹಾಕಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಪಕ್ಷಗಳು ಸೇರಿದಂತೆ ಎಲ್ಲರೊಂದಿಗೆ ಸುದೀರ್ಘ ಸಮಾಲೋಚನೆ ಬಳಿಕವಷ್ಟೇ ಮಸೂದೆಗಳನ್ನು ಮಂಡನೆ ಮಾಡಲಾಗಿದೆ. ಕೃಷಿ ಕ್ಷೇತ್ರ ಸಂಬಂಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಜತೆ ಮಾತ್ರವಲ್ಲ, ಸಂಸದರು ಮತ್ತು ರೈತರೊಂದಿಗೂ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಬಹಳ ಶ್ರಮ ವಹಿಸಿ ಕಾಯ್ದೆ ರೂಪಿಸಲಾಗಿದೆ. ಈಗ ಈ ರೀತಿ ಏಕೆ ಇಲ್ಲಸಲ್ಲದ ಆರೋಪ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಇಬ್ಬಗೆ ಧೋರಣೆ ಅನುಸರಿಸುತ್ತಿದೆ. ರೈತರ ಬೆಳೆಗೆ ನೀಡಲಾಗುವ ಬೆಂಬಲ ಬೆಲೆ ಹಾಗೂ ಸರ್ಕಾರದ ಖರೀದಿ ಪ್ರಕ್ರಿಯೆಯನ್ನು ಕಾಯ್ದೆಯಲ್ಲಿ ಒಳಗೊಳ್ಳಬೇಕೆಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿಯನ್ನು ತೆಗೆದುಹಾಕುವುದಾಗಿ ಹೇಳಿತ್ತು. ಬೆಂಬಲ ಬೆಲೆಯನ್ನು ಕಾಯ್ದೆಯಾಗಿ ರೂಪಿಸುವ ಬಗ್ಗೆ ಏನೂ ಹೇಳಿರಲಿಲ್ಲ. ಈಗ ಏಕೆ ಈ ಒತ್ತಾಯ ಎಂದು ಪ್ರಶ್ನಿಸಿದ್ದಾರೆ.