ದಾಳಿ ವೇಳೆ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಪತ್ತೆಯಾಗಿಲ್ಲ ಎಂದು ಹರಿದಾಡ್ತಿರೋ ಸುದ್ದಿ ನಿಜವೆ? ಎಸ್​ಐಟಿ ಹೇಳಿದ್ದು ಇಷ್ಟು...

aryan khan
Published on

ಮುಂಬೈ: ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ಕೊನೆಗೂ ಬಿಗ್​ ರಿಲೀಫ್​ ಸಿಕ್ಕಿದ್ದು, ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಇದನ್ನು ಎಸ್​ಐಟಿ ನಿರಾಕರಿಸಿದೆ.

ಪ್ರಕರಣದ ತನಿಖೆ ನಡೆಸಿದ ಎನ್​ಸಿಬಿ ತಂಡ ವರದಿ ಪ್ರಕಟಿಸಲಿದ್ದು, ಅದರಲ್ಲಿ ಶಾರೂಖ್​ ಪುತ್ರ ಆರ್ಯನ್​ ಖಾನ್​ರಿಗೆ ಕ್ಲೀನ್​ಚಿಟ್​ ನೀಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. 'ಆರ್ಯನ್ ಖಾನ್ ಎಂದಿಗೂ ಡ್ರಗ್ಸ್ ಜೊತೆ ಸಂಬಂಧ ಹೊಂದಿರಲಿಲ್ಲ. ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‌ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಚಾಟ್‌ಗಳು ಆರ್ಯನ್ ಖಾನ್ ಯಾವುದೇ ಅಂತರಾಷ್ಟ್ರೀಯ ಸಿಂಡಿಕೇಟ್‌ನ ಭಾಗವಾಗಿದ್ದರು ಎಂದು ಸೂಚಿಸುವುದಿಲ್ಲ ಅಂತ ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ' ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೆ ಇವೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಎನ್​ಸಿಬಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥ ಸಂಜಯ್ ಸಿಂಗ್ ಹೇಳಿದ್ದಾರೆ.

ಆರ್ಯನ್​ ಖಾನ್​ ನಿರ್ದೋಷಿ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಇದರ ತನಿಖೆ ನಡೆಸಲಾಗುತ್ತಿದೆ. ಆದರೆ ಯಾವುದೇ ತೀರ್ಮಾನಕ್ಕೆ ಇನ್ನೂ ಬಂದಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net